ಶಿವಮೊಗ್ಗ: ದೀಪದ ಕೆಳಗೆ ಕತ್ತಲು ಎಂಬ ಗಾದೆಮಾತು ಶರಾವತಿ ಸಂತ್ರಸ್ತರ ವಿಚಾರದಲ್ಲಿ ಸತ್ಯವಾಗಿದೆ. ನಾಡಿಗೆ ಬೆಳಕು ನೀಡುವ ಸಲುವಾಗಿ 1962ರಲ್ಲಿ ನಿರ್ಮಾಣವಾದ ಲಿಂಗನಮಕ್ಕಿ ಜಲಾಶಯದಿಂದ ನೂರಾರು ಗ್ರಾಮಗಳು ಮುಳುಗಡೆಯಾದವು. ಅಣೆಕಟ್ಟು ನಿರ್ಮಾಣ ಮಾಡಿ ನೀರು ಸಂಗ್ರಹವಾಗಲು ಪ್ರಾರಂಭಿಸುತ್ತಿದ್ದಂತೆ ಕರ್ನಾಟಕ ವಿದ್ಯುತ್ ನಿಗಮದವರು ಮುಳುಗಡೆಯಾಗುತ್ತಿದ್ದ ಗ್ರಾಮಸ್ಥರನ್ನು ಲಾರಿಯಲ್ಲಿ ತುಂಬಿಕೊಂಡು ಶೆಟ್ಟಿಹಳ್ಳಿ ಸೇರಿದಂತೆ ವಿವಿಧ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದರು. ಆದರೆ ಅವರ ಸಮಸ್ಯೆ ಮಾತ್ರ ಇನ್ನೂ ಜೀವಂತವಾಗಿವೆ.
ಕಾಡಿಗೆ ಬಂದವರು ಇದೇ ನಮ್ಮ ಕರ್ಮಭೂಮಿ ಎಂದುಕೊಂಡು ಕಾಡನ್ನು ಕಡಿದು ಉಳುಮೆ ಮಾಡುತ್ತ ಬದುಕು ಕಟ್ಟಿಕೊಂಡರು. ಆದರೆ ಕೇಂದ್ರ ಸರ್ಕಾರ 1980ರಲ್ಲಿ ಅರಣ್ಯ ಸಂರಕ್ಷಣೆ ಮಾಡಬೇಕೆಂದು ಅರಣ್ಯದ ಕುರಿತು ಒಂದೊಂದೇ ಕಠಿಣ ಕಾನೂನು ಜಾರಿ ಮಾಡುತ್ತಾ ಬಂದಿತು. ಅದರ ಮುಂದುವರೆದ ಭಾಗವಾಗಿ ಅಂದು ಊರಿನಿಂದ ಕಾಡಿಗೆ ಬಂದಿದ್ದವರು ಈಗ ಮತ್ತೆ ಎಲ್ಲಿಗೆ ಎಂದು ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆ ಬಗೆಹರಿಸದ ಸರ್ಕಾರ: ಅಂದು ಲಿಂಗನಮಕ್ಕೆ ಅಣೆಕಟ್ಟು ನಿರ್ಮಾಣವಾಗುತ್ತಿದಂತೆ ಅಲ್ಲಿನ ಸಂತ್ರಸ್ತರನ್ನು ಕಾಡಿಗೆ ಬಿಟ್ಟ ಅಂದಿನ ಸರ್ಕಾರ ಅವರಿಗೆ ಹಕ್ಕುಪತ್ರ ನೀಡಲಿಲ್ಲ. ಸರ್ಕಾರದ ಮಟ್ಟದಲ್ಲಿ ನಿರ್ಣಯಗಳನ್ನು ತೆಗೆದುಕೊಂಡು ಅವರಿಗೆ ನ್ಯಾಯ ಒದಗಿಸಲಿಲ್ಲ. ತಮಗೆ ಹಕ್ಕುಪತ್ರ ನೀಡಿ ಎಂದು ಸಾಕಷ್ಟು ಸಲ ಹೋರಾಟ ಮಾಡಿದರೂ ಸಹ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.
ಪ್ರತಿ ಚುನಾವಣೆಯಲ್ಲಿ ಶರಾವತಿ ನಿರಾಶ್ರಿತರ ವಿಚಾರ: ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಗಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾದ ಮೇಲೆ ನಿರಾಶ್ರಿರ ಕೂಗು ಯಾವ ರಾಜಕೀಯ ಪಕ್ಷಕ್ಕೂ ಕೇಳಿಸಲೇ ಇಲ್ಲ. ಮುಖ್ಯವಾಗಿ ಶಿವಮೊಗ್ಗ ಜಿಲ್ಲೆಯ ನಾಯಕರುಗಳಿಗೆ ಪ್ರತಿ ಚುನಾವಣೆಯಲ್ಲಿ ಇದೇ ಚುನಾವಣಾ ವಿಷಯವಾಗುತ್ತಿತ್ತು. ನಿಮಗೆ ನಮ್ಮ ಸರ್ಕಾರ ಬಂದರೆ ನ್ಯಾಯ ಒದಗಿಸುತ್ತೇವೆ ಎಂಬ ಭರವಸೆ ನೀಡುತ್ತಾ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದರು. ಆದರೆ ಸಮಸ್ಯೆ ಮಾತ್ರ ಇನ್ನೂ ಜೀವಂತವಾಗಿದೆ.
ಇದನ್ನೂ ಓದಿ:ನಾಡಿದ್ದು ಶರಾವತಿ ಸಂತ್ರಸ್ತರ ಪರವಾಗಿ ಮಲೆನಾಡು ಜನಾಕ್ರೋಶ ಪಾದಯಾತ್ರೆ: ಮಧು ಬಂಗಾರಪ್ಪ
2 ಬಾರಿ ನೆಲೆ ಕಳೆದುಕೊಂಡ ಸಂತ್ರಸ್ತರು:ಈ ನಡುವೆ ಅರಣ್ಯ ಇಲಾಖೆಯ ನಿರಾಶ್ರಿತರು ಇರುವ ಜಾಗ ಅರಣ್ಯಕ್ಕೆ ಸೇರಿದ್ದು. ಇದನ್ನು ನಮ್ಮ ವಶಕ್ಕೆ ಪಡೆಯಲಾಗುವುದು ಎನ್ನುತ್ತಾ ಜನರಲ್ಲಿ ಭಯವನ್ನುಂಟು ಮಾಡಿದ್ದರು. ನಿರಾಶ್ರಿತರಾದ ಬಹು ಸಂಖ್ಯಾತರ ಸಮುದಾಯದವರೇ ಜಿಲ್ಲೆಯನ್ನು ಆಳಿದರೂ ಸಹ ಪರಿಹಾರ ಮಾತ್ರ ಕಂಡು ಹಿಡಿಯಲಿಲ್ಲ. ಶರಾವತಿ ನಿರಾಶ್ರಿತರು ಎರಡು ಬಾರಿ ಮುಳುಗಡೆಯಾಗಿ ತಮ್ಮ ನೆಲೆ ಕಳೆದುಕೊಂಡಿದ್ದರು.
- 1942ರಲ್ಲಿ ಶರಾವತಿ ನದಿಗೆ ಮಡೆನೂರು ಬಳಿ ಮೊದಲ ಬಾರಿ ಬ್ರಿಟಿಷರು ಅಣೆಕಟ್ಟು ಕಟ್ಟಿದ್ದರು.
- ನಂತರ ಮೈಸೂರು ಅರಸರು ಲಿಂಗನಮಕ್ಕಿ ಬಳಿ ಅಣೆಕಟ್ಟು ಕಟ್ಟಿದರು. ಇದರಿಂದ ಮಡೆನೂರು ಅಣೆಕಟ್ಟು ಮುಳುಗಡೆಯಾಯಿತು. ಅಂದು ಸುಮಾರು 20 ಸಾವಿರ ಜನ ನಿರಾಶ್ರಿತರಾದರು.