ಶಿವಮೊಗ್ಗ: ಆರು ದಶಕಗಳ ಹಿಂದೆ ಇಡೀ ನಾಡಿಗೆ ಬೆಳಕು ಕೊಡಲು ತಮ್ಮ ಬದುಕನ್ನು ತ್ಯಾಗ ಮಾಡಿದ ಶರಾವತಿ ಜಲವಿದ್ಯುತ್ ಯೋಜನೆ ಸಂತ್ರಸ್ತರ ಪುನರ್ವಸತಿ ಯೋಜನೆಯ ಅರಣ್ಯ ಭೂಮಿ ಡಿನೋಟಿಫಿಕೇಶನ್ ರದ್ದುಪಡಿಸಿ, ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕಾಗೋಡು ತಿಮ್ಮಪ್ಪ ಒತ್ತಾಯಿಸಿದರು.
ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತಿ ಸಮಿತಿ ವತಿಯಿಂದ ನಗರದ ಈಡಿಗರ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ಬಾಕಿ ಉಳಿದಿರುವ ಸರ್ಕಾರಿ ಆದೇಶಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಕಾಗೋಡು ತಿಮ್ಮಪ್ಪ, ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಹೋರಾಟಕ್ಕೆ ಕೈ ಜೋಡಿಸುವುದಾಗಿ ತಿಳಿಸಿದರು. ಸಂತ್ರಸ್ತರ ಪುನರ್ ವಸತಿಗಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 9 ಸಾವಿರಕ್ಕೂ ಹೆಚ್ಚು ಭೂಮಿಯನ್ನು ಡಿನೋಟಿಫಿಕೇಶನ್ ಮಾಡಲಾಗಿತ್ತು. 1 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿತ್ತು. ಆದರೆ, ಪರಿಸರವಾದಿಯೊಬ್ಬರು ಡಿನೋಟಿಫಿಕೇಶನ್‌ಗೆ ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಸಾವಿರಾರು ರೈತ ಕುಟುಂಬಗಳು ಭೂವಂಚಿತರಾಗಿದ್ದಾರೆ ಎಂದರು.
ಇದನ್ನೂ ಓದಿ:ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ನ.28ರಂದು ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ
ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ತನಕ ಹೋರಾಟ ನಡೆಸಲಾಗುವುದು. ಶರಾವತಿ ಸಂತ್ರಸ್ತರ ಭೂ ಹಕ್ಕಿನ ವಿಚಾರವನ್ನು ಈ ಬಾರಿಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುತ್ತೇನೆ. ಜನರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.