ಶಿವಮೊಗ್ಗ:ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಾಚೆಗಿರುವ ಕರೂರು ಹಾಗೂ ಬಾರಂಗಿ ಹೋಬಳಿಯ ಜನರಿಗೆ ಯಾವಾಗಲೂ ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಹಿನ್ನೀರಿನ ಆಚೆ ಇರುವ ಕುಗ್ರಾಮಗಳು ಸಂಜೆಯಾಗುತ್ತಿದ್ದಂತೆ ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ರಾತ್ರಿ ವೇಳೆ ಆರೋಗ್ಯ ಸಮಸ್ಯೆಯಾದರೆ ಇಲ್ಲಿನ ಜನರನ್ನು ದೇವರೇ ಕಾಪಾಡಬೇಕು. ಕನಿಷ್ಠ ಮೂಲ ಸೌಕರ್ಯಗಳಿಂದಲೂ ವಂಚಿತರಾಗಿ ಬದುಕುತ್ತಿರುವ ಈ ಜನರಿಗೆ ಇದೀಗ ಸಿಂಗಳೀಕ ಅಭಯಾರಣ್ಯದ ಬಫರ್ ಝೋನ್ ಘೋಷಣೆ ಮಾಡಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಶರಾವತಿ ಅಭಯಾರಣ್ಯದ ಘೋಷಣೆಯನ್ನು ಈ ಹಿಂದೆಯೇ ಮಾಡಲಾಗಿದ್ದು, ಶರಾವತಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಸಿಂಗಳೀಕಗಳ (ಲಯನ್ ಟೆಯಲ್ಡ್ ಮಕಾಕ್) ಸಂಖ್ಯೆ ಹೆಚ್ಚಾಗಿದ್ದು ಅಭಯಾರಣ್ಯವನ್ನು ಸಿಂಗಳೀಕ ಅಭಯಾರಣ್ಯ ಎಂದು ಘೋಷಣೆ ಮಾಡಲಾಗಿದೆ. ದೇಶದ ಮೊದಲ ಸಿಂಗಳೀಕ ಅಭಯಾರಣ್ಯ ಇದಾಗಿದೆ. ಶರಾವತಿ ಅಭಯಾರಣ್ಯದ ವ್ಯಾಪ್ತಿಯೇ ಸಿಂಗಳೀಕ ಅಭಯಾರಣ್ಯದ ವ್ಯಾಪ್ತಿಯಾಗಿದ್ದರಿಂದ ಇದುವರೆಗೆ ಜನರಿಗೆ ಅಷ್ಟೊಂದು ಸಮಸ್ಯೆಯಾಗಿರಲಿಲ್ಲ. ಆದರೆ ಇದೀಗ ಕೇಂದ್ರ ಸರ್ಕಾರ ಅಭಯಾರಣ್ಯ ವ್ಯಾಪ್ತಿಯ ಅಕ್ಕಪಕ್ಕದಲ್ಲಿ ಬರುವ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸುವಂತೆ ಆದೇಶ ನೀಡಿದೆ.