ಶಿವಮೊಗ್ಗ :ಜೂನ್ 11 ರಂದು ಜಾರಿಗೆ ತಂದ ಶಕ್ತಿ ಯೋಜನೆಯ ಮೂಲಕ ರಾಜ್ಯ ಸರ್ಕಾರವು ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಯೋಜನೆಗೆ ಉತ್ತಮ ಪ್ರತಿಕ್ರಿಯೆ ಮತ್ತು ಸಕಾರಾತ್ಮಕ ಸ್ಪಂದನೆ ದೊರೆತಿದೆ.
ಶಿವಮೊಗ್ಗ- ಮಹಿಳೆಯರ ಬಸ್ ಪ್ರಯಾಣದ ವಿವರ:ಈ ತಿಂಗಳಲ್ಲಿ ಶಿವಮೊಗ್ಗ ವಿಭಾಗದಲ್ಲಿ ಒಟ್ಟು 12,39,661 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, 4,25,35,743 ರೂ. ವೆಚ್ಚವನ್ನು ಸರ್ಕಾರ ಭರಿಸಲಿದೆ. ಜುಲೈನಲ್ಲಿ 24,01,146 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ತಿಂಗಳ ವೆಚ್ಚ 7,62,79,165 ರೂ. ಆಗಿದೆ. ಆಗಸ್ಟ್ 22 ರವರೆಗೆ 16,64,330 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 5,46,26,015 ರೂ. ವೆಚ್ಚ ಸೇರಿದಂತೆ ಒಟ್ಟಾರೆ ಜುಲೈ 11 ರಿಂದ ಆಗಸ್ಟ್ 22 ರವರೆಗೆ 53,05,137 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಒಟ್ಟು 17,34,40,923 ರೂ. ವೆಚ್ಚವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸರ್ಕಾರ ಭರಿಸಲಿದೆ ಎಂದು ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಕ ವಿಜಯಕುಮಾರ್ ತಿಳಿಸಿದ್ದಾರೆ.
ಈ ಯೋಜನೆ ಅನುಷ್ಠಾನದ ನಂತರ ನೂಕುನುಗ್ಗಲು ತಪ್ಪಿಸಲು, ಅಹಿತಕರ ಘಟನೆಗಳು ನಡೆಯದಂತೆ ಸೂಪರ್‍ವೈಸರ್‌ಗಳನ್ನು ನಿಯೋಜಿಸಿ ಕ್ರಮ ವಹಿಸಲಾಗಿದೆ. ವಿಶೇಷ ಜಾತ್ರೆ/ ಹಬ್ಬವಿರುವ ದಿನಗಳನ್ನು ಗುರುತಿಸಿ ಪ್ರಯಾಣಿಕರ ಸಂದಣಿ ಅನುಗುಣವಾಗಿ ಘಟಕದಿಂದ ಹೆಚ್ಚುವರಿ ಬಸ್ಗಳ ತ್ವರಿತ ನಿಯೋಜನೆ, ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.