ಶಿವಮೊಗ್ಗ:14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಸತ್ರ ನ್ಯಾಯಾಲಯವು 27 ವಯಸ್ಸಿನ ಯುವಕನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.50 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ದಂಡ ಕಟ್ಟಲು ವಿಫಲರಾನಾದರೆ ಹೆಚ್ಚುವರಿ 9 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
2022ರಲ್ಲಿ ಶಿವಮೊಗ್ಗದ ನಿವಾಸಿ, ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆಯು (ಬಾಲಕಿ) ತಾಯಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪೋಕ್ಸೋ ಕೋರ್ಟ್ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದರು.
ಮಹಿಳೆಯ ಸರ ಕಳ್ಳತನ; 3 ವರ್ಷ ಜೈಲು ಶಿಕ್ಷೆ:ಕುಡಿಯಲು ನೀರು ಕೇಳುವ ನೆಪದಲ್ಲಿ ಮಹಿಳೆಯ ಸರ ಕಳ್ಳತನ ಮಾಡಿ ಪರಾರಿಯಾಗಿದ್ದ ವ್ಯಕ್ತಿಗೆ ಭದ್ರಾವತಿಯ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. 2015ರಲ್ಲಿ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಜನ್ನಾಪುರ ಬಡಾವಣೆಯಲ್ಲಿ ಭದ್ರಾವತಿಯ ಸಂಕ್ಲಿಪುರದ ನಿವಾಸಿ ಕುಮಾರ್ (42) ಎಂಬಾತ ಜನ್ನಾಪುರದ 60 ವರ್ಷದ ಮಹಿಳೆಯ ಮನೆಗೆ ಬಂದು ಕುಡಿಯಲು ನೀರು ಕೇಳುತ್ತಾನೆ. ನೀರು ತರಲು ಹೋದ ಮಹಿಳೆಯ ಹಿಂದೆ ಹೋಗಿ ಮಹಿಳೆಯ ಕೊರಳಲ್ಲಿ ಇದ್ದ ಮಾಂಗಲ್ಯ ಸರ ಕಿತ್ತುಕೊಂಡು, ಬಳಿಕ ದಿಂಬಿನಿಂದ ಉಸಿರು ಗಟ್ಟಿಸಿ ಕೊಲ್ಲಲು ಯತ್ನಿಸಿ ಪರಾರಿಯಾಗಿದ್ದ. ಈ ಕುರಿತು ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.