ಶಿವಮೊಗ್ಗ: ಹುಣಸೋಡಿನ ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಹುಣಸೋಡು ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಗೋ.ರಮೇಶ್ ಗೌಡ ಏಕಾಂಗಿಯಾಗಿ ಪಾದಯಾತ್ರೆ ನಡೆಸಿದ್ದಾರೆ.
ಹುಣಸೋಡು ಗ್ರಾಮದಿಂದ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿವರೆಗೂ ಏಕಾಂಗಿಯಾಗಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ರೂಪದಲ್ಲಿ ಪಾದಯಾತ್ರೆ ನಡೆಸಿದರು.
ಜನವರಿ 21ರ ರಾತ್ರಿ ನಡೆದ ಸ್ಫೋಟದಲ್ಲಿ ಆರು ಜನ ಮೃತಪಟ್ಟು ಮೂರು ವಾಹನಗಳು ಧ್ವಂಸವಾಗಿದ್ದವು. ಸ್ಫೋಟದ ತೀವ್ರತೆಗೆ ಹುಣಸೋಡು ಗ್ರಾಮ, ಬಸವನಗಂಗೂರು ಗ್ರಾಮ ಹಾಗೂ ಬೊಮ್ಮನಕಟ್ಟೆ ಗ್ರಾಮಗಳಲ್ಲಿ ಹಲವು ಮನೆಗಳು ಬಿರುಕು ಬಿಟ್ಟಿವೆ. ನೂರಾರು ಮನೆಯ ಟಿವಿಗಳು ಸುಟ್ಟು ಹೋಗಿವೆ. ಕೆಲವು ಮನೆಗಳು ಈಗಲೋ ಆಗಲೋ ಬೀಳುವಂತಿವೆ. ಈ ಕಾರಣಕ್ಕೆ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದು ಗ್ರಾಮಸ್ಥರು ಸುಸ್ತಾಗಿದ್ದಾರೆ.
ಇಂದರಿಂದ ನವಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಗೋ.ರಮೇಶ್ ಗೌಡ ಏಕಾಂಗಿಯಾಗಿ ಪಾದಯಾತ್ರೆ ನಡೆಸಿದ್ದಾರೆ. ಜಿಲ್ಲಾಡಳಿತ ಹಾನಿಗೊಳಗಾದ ಮನೆಗಳ ಸರ್ವೆ ನಡೆಸಬೇಕು. ಅದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಅಂದು ಸ್ಫೋಟವಾದ ಜಿಲೆಟಿನ್ ಕಡ್ಡಿಗಳನ್ನು ಒಂದು ಕ್ರಷರ್‌ನವರು ತರಿಸಲು ಸಾಧ್ಯವಿಲ್ಲ. ಇದರ ಹಿಂದೆ ಇರುವವರನ್ನು ಪೊಲೀಸ್ ಇಲಾಖೆ ಹಿಡಿದು ಕಾನೂನಾತ್ಮಾಕವಾಗಿ ಶಿಕ್ಷಿಸಬೇಕು ಎಂದು ಆಗ್ರಹ ಮಾಡಿದ್ದಾರೆ.