ಶಿವಮೊಗ್ಗ:ಪ್ರಧಾನಿ ಮೋದಿ ಜನ್ಮ ದಿನ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 104ನೇ ಜಯಂತಿ ಅಂಗವಾಗಿ ಸೆಪ್ಟಂಬರ್ 14ರಿಂದ 20ರವರೆಗೆ ಸೇವಾ ಸಪ್ತಾಹ ಹಮ್ಮಿಕೊಳ್ಳಲಿದ್ದು, ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಗರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಹೇಳಿದರು.
ನಗರ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಪ್ರಧಾನಿ ಮೋದಿ ಅವರ ಜನ್ಮ ದಿನವಾದ ಸೆ.17ರಂದು ಬೆಳಿಗ್ಗೆ 10 ಗಂಟೆಗೆ ನಗರದ ಮೆಗ್ಗಾನ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಗುವುದು. ಅವರ ಸಾಧನೆ ಕುರಿತು ನಗರ ಎಲ್ಲಾ ಕಡೆಯಲ್ಲಿ ಫ್ಲೇಕ್ಸ್ ಅಳವಡಿಸಲಾಗುವುದು ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಅದೇ ದಿನ ಸಂಜೆ ಬಿಜೆಪಿ ಕಚೇರಿಯಲ್ಲಿ ಬಡವರಿಗೆ ಉಚಿತವಾಗಿ ಕನ್ನಡಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸೆ.18ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಗುವುದು. ಸೆ.25ರಂದು ಪಂಡಿತ್ ದೀನ್ ದಯಾಳ್ ಅವರ 104 ನೇ ಜಯಂತಿ ಅಂಗವಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ 299 ಬೂತ್ಗಳಲ್ಲಿ ಪಂಡಿತ್ ಜೀ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಕಾರ್ಯಕ್ರಮ ಹಾಗೂ ಗಿಡ ನೆಟ್ಟು, ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಸಂಕಲ್ಪವನ್ನು ಮಾಡಲಾಗುವುದು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆಯಂತೆ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಮೂಲಕ ಸಹಿ ಸಂಗ್ರಹ, ಜಾಗೃತಿ ಅಭಿಯಾನ, ಬೀದಿ ನಾಟಕ ಹಾಗೂ ಎಲ್ಲಾ ಪೊಲೀಸ್ ಠಾಣೆಗಳಿಗೂ ಡ್ರಗ್ಸ್ ಮಾರಾಟಗಾರರ ಬಗ್ಗೆ ಮಾಹಿತಿ ತಿಳಿದಿದ್ದರೆ ದೂರು ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ.20ರ ಬೆಳಗ್ಗೆ 8ರಿಂದ 9 ಗಂಟೆವರೆಗೆ ನಗರದ ಎಲ್ಲಾ ವಾರ್ಡ್ಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಅಡಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.