ಶಿವಮೊಗ್ಗ: ಕೊರೊನಾ ಸೋಂಕಿನ ಹಿನ್ನೆಲೆ ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಕೊರೊನಾ ನಿಯಂತ್ರಣಕ್ಕೆ ತಾಲೂಕು ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಇಲ್ಲಿನ ಭದ್ರಾವತಿ ನಗರಸಭೆ ಕಾರ್ಯಾಲಯ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣಕ್ಕೆ ತಾಲೂಕು ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು.
ತಾಲೂಕು ಮಟ್ಟದಲ್ಲಿ ಆಸ್ಪತ್ರೆ ಗುರುತಿಸಬೇಕು. ಭದ್ರಾವತಿ ನಗರದಲ್ಲಿ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆಯನ್ನು ಒದಗಿಸಲು ಸೂಕ್ತ ಸೌಲಭ್ಯಗಳಿರುವ ಆಸ್ಪತ್ರೆಗಳನ್ನು ಗುರುತಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರು ಆರೋಗ್ಯ ಸೇವೆಯನ್ನು ಪಡೆಯಲು ಕಷ್ಟ ಅನುಭವಿಸಬಾರದು ಎಂದು ಹೇಳಿದರು.
ಅಗತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸಮಯ ನಿಗದಿಪಡಿಸಬೇಕು. ಪ್ರತಿ ವಾರ್ಡ್‍ನಲ್ಲಿ ತರಕಾರಿ, ದಿನಸಿ ಇತ್ಯಾದಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವಾಗ ಮುಖ್ಯ ರಸ್ತೆಗೆ ಸಾರ್ವಜನಿಕರು ಬರುವ ಅಗತ್ಯವಿರುವುದಿಲ್ಲ. ಆದರೆ, ಕೆಲವರು ಅನವಶ್ಯಕವಾಗಿ ರಸ್ತೆಗೆ ಇಳಿಯುತ್ತಿದ್ದು, ಅಂತವರನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಏಪ್ರಿಲ್ ತಿಂಗಳ ಪಡಿತರ ಇನ್ನೆರಡು ದಿನಗಳಲ್ಲಿ ವಿತರಣೆ ಆರಂಭವಾಗಲಿದೆ. ಎಲ್ಲರೂ ಒಂದೇ ಅವಧಿಯಲ್ಲಿ ಪಡಿತರ ಕೊಳ್ಳಲು ಹೊರಗೆ ಬಂದರೆ ಜನಸಂದಣಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಪಡಿತರರಿಗೆ ಟೋಕನ್ ವಿತರಿಸಿ, ನಿಗದಿತ ದಿನದಂದು ಬಂದು ಪಡಿತರ ಖರೀದಿಸಲು ವ್ಯವಸ್ಥೆ ಮಾಡಬೇಕು. ಇದೇ ರೀತಿ ಬಿಸಿಯೂಟದ ಅಕ್ಕಿಯನ್ನು ವಿದ್ಯಾರ್ಥಿಗಳಿಗೆ ಸುಗಮವಾಗಿ, ಯಾವುದೇ ಗೊಂದಲವಾಗದಂತೆ ತಲುಪಿಸಲು ಸಹ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಪ್ರತಿ ದಿನ ಅಗತ್ಯ ವಸ್ತುಗಳನ್ನು ಕೊಳ್ಳಲು ಬೆಳಿಗ್ಗೆ 9ರಿಂದ 2 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ತಳ್ಳು ಗಾಡಿ ಮೂಲಕ ವಾರ್ಡ್‍ವಾರು ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಪ್ರಕಾಶ್ ಮಾಹಿತಿ ನೀಡಿದರು.