ಶಿವಮೊಗ್ಗ:ಸಾವರ್ಕರ್ ಫ್ಲೆಕ್ಸ್ ತೆರವು ವಿಚಾರ ಸಂಬಂಧ ನಡೆದ ಗಲಾಟೆ ಹಿನ್ನೆಲೆಯಲ್ಲಿ ನಗರದಲ್ಲಿ ವಿಧಿಸಲಾಗಿದ್ದ 144 ಸೆಕ್ಷನ್ ಅನ್ನು ಆಗಸ್ಟ್ 23ರವರೆಗೆ ವಿಸ್ತರಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಸೋಮವಾರದಿಂದ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಬೂದಿ ಮುಚ್ಚಿದ ಕೆಂಡದಂತಿರುವ ಕಾರಣ ನಿಷೇಧಾಜ್ಞೆ ಮುಂದುವರೆಸಲಾಗಿದೆ.
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಆ.15 ರಂದು ಇರಿಸಲಾಗಿದ್ದ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ ಬೆನ್ನಲ್ಲೇ ಗಲಾಟೆ ನಡೆದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹೀಗಿದ್ದರೂ ಕೆಲ ಗಂಟೆಗಳಲ್ಲೇ ರಾಜಸ್ಥಾನ ಮೂಲದ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು.