ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ಅವರು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಹೇಳಿಕೆ ನೀಡುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಸಲೀಂ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಜರಂಗದಳದ ಕಾರ್ಯಕರ್ತನ ಹಲ್ಲೆಗೆ ಸಂಬಂಧಿಸಿದಂತೆ ಶಾಂತಿ ಕಾಪಾಡುವ ಹೇಳಿಕೆ ನೀಡುವುದನ್ನು ಬಿಟ್ಟು ಮುಸಲ್ಮಾನ ಗುಂಡಗಳು ಎಂಬ ಹೇಳಿಕೆಯನ್ನು ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಹೇಳಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸಕ್ಕೆ ಇಡೀ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವುದು ಖಂಡನೀಯ ಎಂದಿದ್ದಾರೆ.
ಸಲೀಂ ಖಾನ್, ಎಸ್ಡಿಪಿಐ ಜಿಲ್ಲಾಧ್ಯಕ್ಷ ಈಶ್ವರಪ್ಪ ನವರು ಬಾಯಿ ಬಿಟ್ಟರೆ ಬರೀ ವಿಷ ಕಾರುತ್ತಾರೆ. ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ಸಚಿವ ಕೆ.ಎಸ್ ಈಶ್ವರಪ್ಪ ನವರು ತಕ್ಷಣ ನಿಲ್ಲಿಸಬೇಕು. ಸಚಿವರ ಇಂತಹ ಹೇಳಿಕೆಯಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಯಾಗಿದೆ. ಮುಂಬರುವ ಗ್ರಾ.ಪಂ ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಇದು ಖಂಡನೀಯ ಎಂದು ಕಿಡಿ ಕಾರಿದ್ದಾರೆ.
ಸಂಸದ ಬಿ. ವೈ ರಾಘವೇಂದ್ರ ಅವರು ಕೇವಲ ಭಜರಂಗದಳದ ಕಾರ್ಯಕರ್ತನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಆದರೆ ಗಲಾಟೆಯಲ್ಲಿ ಗಾಯಗೊಂಡು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 18ಕ್ಕೂ ಹೆಚ್ಚು ಜನರ ಆರೋಗ್ಯ ವಿಚಾರಿಸಿಲ್ಲ. ರಾಘವೇಂದ್ರ ಅವರು ಕೇವಲ ಒಂದು ಸಮುದಾಯದ ಸಂಸದರಲ್ಲ. ಅವರು ಜಿಲ್ಲೆಯ ಸಂಸದರು ಎಂದಿದ್ದಾರೆ.
ಪೋಲಿಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಜಿಲ್ಲಾಡಳಿತ, ಗಲಾಟೆಯಲ್ಲಿ ಆಸ್ತಿ ಪಾಸ್ತಿ ನಷ್ಟ ಅನುಭವಿಸಿದವರಿಗೆ ಹಾಗೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.