ಶಿವಮೊಗ್ಗ: ತಾನು ಕಲಿತ ವಿದ್ಯೆಯಿಂದ ಬೇರೆಯವರಿಗೂ ಸಹ ಒಳ್ಳೆಯದಾಗಬೇಕು ಎಂದು ತಿಳಿದುಕೊಂಡವರು ಭಾರತದವರು ಮಾತ್ರ. ಈಗ ಎಲ್ಲವನ್ನು ಹಣಕ್ಕಾಗಿ ಬಳಕೆ ಮಾಡಲಾಗುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ನಗರದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಆಯೋಜಿಸಿದ್ದ ವೈಜ್ಞಾನಿಕ ಸಮ್ಮೇಳನ 2021 ಅನ್ನು ಹಾಲು ಉಕ್ಕಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಈಗ ವಿದ್ಯೆ ಒಳ್ಳೆಯದಕ್ಕೆ ಬಳಸದೇ ಯುದ್ದಕ್ಕೆ ಬಳಕೆ ಮಾಡಲಾಗುತ್ತಿದೆ ಎಂದರು.
ಮನುಷ್ಯ ವಿಜ್ಞಾನ ಹಾಗೂ ತಂತ್ರಜ್ಞಾನಗಳಿಂದ ತಮ್ಮ ಜೀವನ ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾನೆ. ನಮ್ಮ ಸುತ್ತಮುತ್ತಲಿನ ಪರಿಸರ ಹೇಗೆ ಇರಬೇಕು ಎಂದು ತಿಳಿದು ಕೊಳ್ಳಬೇಕಿದೆ. ತಂತ್ರಜ್ಞಾನವನ್ನು ಕೆಲವರು ಎಲ್ಲರ ಒಳ್ಳೆಯದಕ್ಕೆ ಬಳಸಿದರೆ, ಮತ್ತೆ ಕೆಲವರು ವೈಯಕ್ತಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ದೈಹಿಕವಾಗಿ ಯಾರು ಬಲಿಷ್ಟರಾಗಿದ್ದರೂ ಅವರು ತಮ್ಮ ಜನಾಂಗ ಹಾಗೂ ತಮ್ಮವರ ನೇತೃತ್ವ ಮಾಡುತ್ತಿದ್ದರು. ಹಿಂದಿನ ಶತಮಾನಗಳಲ್ಲಿ ಮೈಟ್ ಇಸ್ ರೈಟ್ ಅಂತ ಇದ್ದರೆ, ಈಗ ಯಂತ್ರಗಳ ಬಳಕೆ ಮಾಡಲಾಗುತ್ತಿದೆ.
ವಿಜ್ಞಾನ ಬಂದ ಹಾಗೆ ಹೊಸ ಆವಿಷ್ಕಾರ ಪ್ರಾರಂಭವಾದವು. ಭೂಮಿ ಅಗಾಧವಾದ ಬಾಹ್ಯಕಾಶ ನೌಕೆಯಾಗಿದೆ. ಪ್ರತಿಗಂಟೆಗೆ 500 ಮೀಟರ್ ಚಲಿಸುತ್ತಿದ್ದೇವೆ. ಅದೇ ರೀತಿ ಸೂರ್ಯ ಸಹ ಓಡುತ್ತಿದ್ದಾನೆ. ಆದರೆ, ಇವೆಲ್ಲ ನಮಗೆ ಗೋಚರಿಸುವುದಿಲ್ಲ. ಪಾಶ್ಚಾತ್ಯರು ನಮಗಿಂತ ಮುಂದೆ ಇದ್ದಾರೆ. 50 ವರ್ಷದ ಹಿಂದೆ ನಿಮ್ಮ ಕೈಯಲ್ಲಿ ಒಂದು ಉಪಕರಣ ಬಂದು ಬೇಕಾದ ಮಾಹಿತಿ ನೀಡುತ್ತೆ ಅಂತ ಹೇಳಿದರೆ ಹುಚ್ಚ ಎನ್ನುತ್ತಿದ್ದರು ಎಂದರು.
ನಾವು ಬೇರೆಯವರ ಆಳ್ವಿಕೆಯಲ್ಲಿ ಉಳಿದ ರಾಷ್ಟ್ರ. ಬೇರೆಯವರ ಜೀವ ಉಳಿಸಲು ಹೇಗೆ ಇರಬೇಕು ಅಂತ ತಿಳಿದಿದೆ. ಕೈಗಾರಿಕಾ ಕ್ರಾಂತಿ ನಡೆದಾಗ ನಮ್ಮಲ್ಲಿನ ಕಚ್ಚಾ ವಸ್ತುಗಳನ್ನು ತೆಗೆದುಕೊಂಡು ಹೋಗಿ ಸಿದ್ದ ವಸ್ತುಗಳನ್ನು ಮಾಡಿಕೊಡುತ್ತಿದ್ದರು. ಈ ವೇಳೆ, ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ಅವರಿಗೆ ಸನ್ಮಾನ ನಡೆಸಲಾಯಿತು.