ಶಿವಮೊಗ್ಗ:ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯನ್ನು ಭಾರತೀಯ ಉಕ್ಕು ಪ್ರಾಧಿಕಾರ ಮುಚ್ಚುವ ಘೋಷಣೆ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಉಳಿಸಬೇಕೆಂದು ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು ಕಳೆದ 37 ದಿನಗಳಿಂದ ಭದ್ರಾವತಿಯ ವಿಐಎಸ್ಪಿ ಕಾರ್ಖಾನೆಯ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದಾರೆ. ಅದರಂತೆ ಇಂದು ಗುತ್ತಿಗೆ ಕಾರ್ಮಿಕರು ಭದ್ರಾವತಿ ಪಟ್ಟಣ ಸ್ವಯಂ ಬಂದ್ ಕರೆ ನೀಡಿದ್ದರು. ಬಂದ್ ಹಿನ್ನಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು ಬಂದ್ ಆಗಿದ್ದವು.
ಬಂದ್ನಿಂದಾಗಿ ಬೆಳಗ್ಗೆಯೇ ಕಾರ್ಮಿಕ ಸಂಘಟನೆಯವರು ನಗರದೆಲ್ಲೆಡೆ ಸಾಗಿ ಅಲ್ಲಲ್ಲಿ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸುತ್ತಾ ಸಾಗಿದರು. ಭದ್ರಾವತಿ ನಗರದ ಎಲ್ಲಾ ವೃತ್ತಗಳಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿ, ಟೈರ್ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಅಗ್ನಿಶಾಮಕ ದಳದ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ನಂತರ ಪಟ್ಟಣದ ವಿವಿಧ ಭಾಗಗಳಿಂದ ಕಾರ್ಮಿಕ ಸಂಘಟನೆಯವರು ಪ್ರತಿಭಟನೆ ಪ್ರಾರಂಭಿಸಿ ಅಂಡರ್ ಬ್ರಿಡ್ಜ್ ಬಳಿ ಬಂದು ಸೇರಿ ಒಂದಾಗಿ ಪ್ರತಿಭಟನ ಮೆರವಣಿಗೆ ನಡೆಸಿದರು.
ಇಲ್ಲಿಂದ ಬಿ.ಹೆಚ್.ರಸ್ತೆಯಿಂದ ಹಳೆ ಸೇತುವೆ ಮೂಲಕ, ಮಾಧವಾಚಾರ್ ವೃತ್ತ, ರಂಗಪ್ಪ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಮೆರವಣಿಗೆ ಸಾಗಿತು. ಭದ್ರಾವತಿ ಪಟ್ಟಣ ವರ್ತಕರ ಸಂಘದವರು ಮನವಿ ಸಲ್ಲಿಕೆಯ ವೇಳೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಗೌಡ ಸೇರಿದಂತೆ ಇತರರು ಇದ್ದರು. ರಂಗಪ್ಪ ವೃತ್ತದಲ್ಲಿ ಮೆರವಣಿಗೆ ಸಾಗುವಾಗ ವಿವಿಧ ಸಮಾಜದವರು ತಮ್ಮ ಸಮಾಜದ ಫ್ಲೆಕ್ಸ್ ಹಿಡಿದು ಹೊರಟಾಗ ಕೆಲವರು ಫ್ಲೆಕ್ಸ್ನಲ್ಲಿ ವಿಐಎಸ್‌ಎಲ್ ಹೆಸರು ಯಾಕಿಲ್ಲ ಎಂದು ಜಟಾಪಟಿ ನಡೆಸಿದರು. ಮನವಿ ಸಲ್ಲಿಕೆಯ ವೇಳೆ ಜೆಡಿಎಸ್ನ ತಾಲೂಕು ಅಧ್ಯಕ್ಷ ಕರುಣಾಕರ ಮೂರ್ತಿ ಅವರಿಗೆ ಮಾತನಾಡಲು ಮೈಕ್ ನೀಡುವ ವೇಳೆ ಶಾಸಕ ಸಂಗಮೇಶ್ ಅವರು ಆಪೇಕ್ಷ ವ್ಯಕ್ತಪಡಿಸಿದ್ದರು. ನಂತರ ಕಾರ್ಮಿಕ ಸಂಘಟನೆಯವರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.