ಶಿವಮೊಗ್ಗ :ಸುಳ್ಳು ಭರವಸೆಗಳನ್ನು ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಜು.3ರಂದು ಮಹಾತ್ಮ ಗಾಂಧಿ ಪಾರ್ಕ್ನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಕಳೆದ 9 ವರ್ಷಗಳ ಹಿಂದೆಯೇ ಹಲವು ಭರವಸೆಗಳನ್ನು ನೀಡಿತ್ತು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದರಂತೆ, 9 ವರ್ಷದಲ್ಲಿ 18 ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು. ಆದರೆ, ಉದ್ಯೋಗ ನೀಡುವುದಿರಲಿ ಇರುವ ಉದ್ಯೋಗಗಳನ್ನೇ ಕಸಿದುಕೊಂಡಿದೆ" ಎಂದು ಆರೋಪಿಸಿದರು.
ಪ್ರಧಾನಿ ಮೋದಿಯವರು ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಅಕೌಂಟ್ಗೆ 15 ಲಕ್ಷ ಜಮಾ ಮಾಡುತ್ತೇವೆ ಎಂದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ್ರೆ, ಗ್ಯಾರಂಟಿ ಬರೆದುಕೊಟ್ಟಿದ್ದಾರಾ ಎಂದು ಬಿಜೆಪಿಯವರು ಪ್ರಶ್ನೆ ಮಾಡುತ್ತಾರೆ. ಬರೆದುಕೊಟ್ಟರೆ ಮಾತ್ರ ಕೊಡಬೇಕೆ, ಮಾತು ಕೊಟ್ಟರೆ ಕೊಡಬಾರದೆ ಎಂದ ಅವರು, 15 ಲಕ್ಷ ರೂಪಾಯಿಯನ್ನು ಮೊದಲು ಕೊಡಲಿ. ಆಮೇಲೆ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾತನಾಡಲಿ ಎಂದರು.
ಪಿಎಸ್ಐ ಹಗರಣದ ದುಡ್ಡಿನ ಮುಂದೆ ಸೋತಿದ್ದೇನೆ : ಬಿಜೆಪಿಯ ಅಧಿಕಾರಾವಧಿಯಲ್ಲಿ ನಡೆದ ಎಲ್ಲಾ ಹಗರಣಗಳನ್ನು ತನಿಖೆ ಮಾಡಲು ಈಗಾಗಲೇ ಸರ್ಕಾರ ನಿರ್ಧರಿಸಿದೆ. ಪಿಎಸ್ಐ ಹಗರಣವನ್ನು ತನಿಖೆ ಮಾಡಬೇಕು. ಈ ಹಗರಣದಲ್ಲಿ ದುಡ್ಡು ಮಾಡಿಕೊಂಡವರು ತೀರ್ಥಹಳ್ಳಿಯ ಚುನಾವಣೆಗೆ ಸುರಿದಿದ್ದರು. ಆ ಹಗರಣದ ದುಡ್ಡಲ್ಲೇ ನಾನು ಸೋತಿದ್ದೇನೆ. ದಿವ್ಯ ಹಾಗರಗಿ, ಸ್ಯಾಂಟ್ರೋ ರವಿ, ಆರ್.ಡಿ. ಪಾಟೀಲ್ ಯಾರು?. ಇವರು ತೀರ್ಥಹಳ್ಳಿಯಲ್ಲಿ 70 ಕೋಟಿ ಹಣ ಖರ್ಚು ಮಾಡಿದ್ದು ಗೊತ್ತೇ ಇದೆ ಎಂದ ಕಿಮ್ಮನೆ ಅವರು, ಈ ದುಡ್ಡಿನ ಮುಂದೆ ನಾನು ಸೋತಿದ್ದೇನೆ ಹೊರತು ಆರಗ ಜ್ಞಾನೇಂದ್ರ ಅವರ ವಿರುದ್ಧ ಅಲ್ಲ ಎಂದು ಆರೋಪಿಸಿದರು. ಬಳಿಕ, 40 % ಕಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಹಗರಣಗಳನ್ನು ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಾನು ಪ್ರತ್ಯೇಕವಾಗಿಯೇ ಒತ್ತಾಯಿಸುತ್ತೇನೆ ಎಂದರು.