ಶಿವಮೊಗ್ಗ:ಸರ್ಕಾರ ನಿಗದಿ ಮಾಡಿದ ದರಪಟ್ಟಿಗಿಂತ ಹೆಚ್ಚಿನ ದರಕ್ಕೆ ಮರಳು ಮಾರಾಟ ಮಾಡುತ್ತಿರುವುದರ ವಿರುದ್ದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ದಬ್ಬಣಗದ್ದೆಯ ಮರಳು ಬ್ಲಾಕ್ 4ರಲ್ಲಿ ಸರ್ಕಾರಿ ದರಕ್ಕಿಂತ ಹೆಚ್ಚಿನ ದರಕ್ಕೆ ಮರಳು ಮಾರಾಟ ಮಾಡುತ್ತಿರುವ ದೂರಿನ ಮೇಲೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಅಲ್ಲಿ ಮರಳಿನ ದರ ಕೇಳಿ ಗಾಬರಿಯಾಗಿದ್ದಾರೆ.
ಒಂದು ಲಾರಿ ಮರಳಿಗೆ ಸರ್ಕಾರ ನಿಗದಿಪಡಿಸಿರುವ ಬೆಲೆ 10,740 ರೂಪಾಯಿ. ಆದರೆ, ಬ್ಲಾಕ್ ನಡೆಸುವ ಪ್ರವೀಣ್ ಎಂಬುವರು 13 ಸಾವಿರ ರೂಪಾಯಿಗೆ ಮರಳು ಮಾರುತ್ತಿದ್ದರು. ಇದರಿಂದ ಗ್ರಾಹಕನ ಮೇಲೆ ಹೆಚ್ಚು ಒತ್ತಡ ಬೀಳುತ್ತಿತ್ತು. ಸದ್ಯ ಶಾಸಕರು ಪರಿಶೀಲನೆ ನಡೆಸಿ ಸರ್ಕಾರಿ ಬೆಲೆಗೆ ಮರಳು ಮಾರಾಟವಾಗಬೇಕೆಂದು ತಾಕೀತು ಮಾಡಿದ್ದಾರೆ.
ಸಂಬಂಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಹಾಗೂ ತೀರ್ಥಹಳ್ಳಿ ತಹಶೀಲ್ದಾರ್ ಅವರಿಗೆ ಈ ನಿಟ್ಟಿನಲ್ಲಿ ನಿಗಾವಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.