ಶಿವಮೊಗ್ಗ:ಕೊರೊನಾ ಬಿಕ್ಕಟ್ಟು ದೇಶದಲ್ಲಿ ಸೃಷ್ಟಿಸಿದ ಅವಾಂತರಗಳು ಒಂದೆರಡಲ್ಲ. ಒಂದೆಡೆ ಇಡೀ ದೇಶದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾದರೆ, ಇನ್ನೊಂದೆಡೆ ಪ್ರವಾಸಿ ತಾಣಗಳು ಸಹ ಆರ್ಥಿಕ ನಷ್ಟಕ್ಕೆ ತುತ್ತಾಗಿವೆ.
ರಾಜ್ಯದ ಎರಡನೇ ಅತಿ ದೊಡ್ಡ ಆನೆ ಬಿಡಾರವಾದ ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿಯ ಸಕ್ರೆಬೈಲು ಆನೆ ಬಿಡಾರ ಈಗ ಸಂಕಷ್ಟದಲ್ಲಿದ್ದು ಆನೆಗಳ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಹೀಗಾಗಿ ಇಲ್ಲಿರುವ ಆನೆಗಳನ್ನು ದತ್ತು ತೆಗೆದುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಆನೆಗಳ ದತ್ತು ಸ್ವೀಕಾರಕ್ಕೆ ಮನವಿ ಈ ಸಕ್ರೆಬೈಲು ಆನೆ ಬಿಡಾರದಲ್ಲಿ ಒಟ್ಟು 22 ಆನೆಗಳಿವೆ. ಅವುಗಳ ನಿರ್ವಹಣೆಗೆ ವಾರ್ಷಿಕವಾಗಿ ಸರಿಸುಮಾರು 48 ಲಕ್ಷದಿಂದ 50 ಲಕ್ಷ ಹಣ ಬೇಕು. ಕಳೆದೆರಡು ವರ್ಷಗಳ ಮುಂಚೆ ಪ್ರವಾಸಿಗರಿಂದ ಆನೆ ಬಿಡಾರದಲ್ಲಿ 80-90 ಲಕ್ಷ ವಾರ್ಷಿಕ ಆದಾಯ ಸಂಗ್ರಹವಾಗುತ್ತಿತ್ತು.
ಆದರೆ, ಕೊರೊನಾ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಕಳೆದ ವರ್ಷ ಕೇವಲ 28 ಲಕ್ಷ ರೂ ಸಂಗ್ರಹವಾಗಿದೆ. ಈ ಹಿನ್ನೆಲೆ ಆನೆಗಳ ನಿರ್ವಹಣೆಗೆ ಹಣಕಾಸಿನ ತೊಂದರೆ ಎದುರಾಗಿದೆ.
ಸಂಕಷ್ಟದಲ್ಲಿ ರಾಜ್ಯದ ಎರಡನೇ ದೊಡ್ಡ ಆನೆ ಬಿಡಾರ ಅಲ್ಲದೇ ಈ ವರ್ಷ ಸರ್ಕಾರ ಪ್ರವಾಸಿಗರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದೆ. ಹಾಗಾಗಿ ಪ್ರವಾಸಿಗರ ಸಂಖ್ಯೆ ಭಾರಿ ಇಳಿಮುಖವಾಗಿದ್ದು, ಜನರಿಂದ ಇಲ್ಲಿಯವರೆಗೆ ಕೇವಲ ಮೂರರಿಂದ ನಾಲ್ಕು ಲಕ್ಷ ಹಣ ಸಂಗ್ರಹವಾಗಿದೆ.
ಈ ಹಿನ್ನೆಲೆ ಆನೆಗಳ ಔಷಧ, ಆಹಾರದ ನಿರ್ವಹಣೆಗೆ ಕಷ್ಟ ಆಗಿದೆ. ಆದರೂ ಸದ್ಯಕ್ಕೆ ಯಾವುದೇ ತೊಂದರೆ ಆಗದಂತೆ ಕಷ್ಟಪಟ್ಟು ಸರಿದೂಗಿಸಿಕೊಂಡು ಆನೆ ಬಿಡಾರ ನಿರ್ವಹಣೆ ಮಾಡಲಾಗುತ್ತಿದೆ.
ಹಾಗಾಗಿ ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕರಿಗೆ ಆನೆಗಳ ದತ್ತು ಸ್ವೀಕಾರಕ್ಕೆ ಅವಕಾಶ ಇದ್ದು, ಆನೆಗಳನ್ನು ದತ್ತು ತೆಗೆದುಕೊಳ್ಳಲು ಮುಂದೆ ಬರಬೇಕು ಎಂದು ಸಕ್ರೆಬೈಲು ಆನೆ ಬಿಡಾರದ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.