ಶಿವಮೊಗ್ಗ:ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ತಾಯಿ ಹಾಗೂ ಮರಿ ಆನೆ ಎರಡೂ ಆರೋಗ್ಯದಿಂದ ಇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಬಿಡಾರದ ಆನೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಭಾನುಮತಿ ಆನೆಯನ್ನು 2014ರಲ್ಲಿ ಹಾಸನ ಜಿಲ್ಲೆಯಲ್ಲಿ ಸೆರೆ ಹಿಡಿದು ಕರೆ ತರಲಾಗಿತ್ತು. ಆನೆ ಬಿಡಾರಕ್ಕೆ ಬಂದ ನಂತರ ಭಾನುಮತಿಯು ಈ ಆನೆ ಮರಿ ಸೇರಿದಂತೆ ಒಟ್ಟು 5 ಮರಿಗಳಿಗೆ ಜನ್ಮ ನೀಡಿದೆ. 22 ಆನೆಗಳ ಪೈಕಿ 6 ಹೆಣ್ಣು ಹಾಗೂ 16 ಗಂಡು ಆನೆಗಳಿವೆ. ಕಳೆದ ತಿಂಗಳು ನೇತ್ರಾವತಿ ಆನೆ ಶಿವಮೊಗ್ಗದ ದಸರಾ ಮೆರವಣಿಗೆಗೆ ಬಂದಾಗ ಮರಿಗೆ ಜನ್ಮ ನೀಡಿತ್ತು. ಭಾನುಮತಿ ಗರ್ಭಿಣಿಯಾಗಿದ್ದ ಕಾರಣ ಶಿವಮೊಗ್ಗದ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿರಲಿಲ್ಲ.
ಇದನ್ನೂ ಓದಿ:ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಿದ್ದ ನೇತ್ರಾವತಿ ಆನೆಗೆ ಮರಿ ಜನನ
ಭಾಗಶಃ ತುಂಡಾಗಿದ್ದ ಭಾನುಮತಿ ಆನೆಯ ಬಾಲ!: ಕಳೆದ ತಿಂಗಳಷ್ಟೇ, ಭಾನುಮತಿ ಆನೆಯ ಬಾಲವನ್ನು ಕಿಡಿಗೇಡಿಗಳು ಕತ್ತರಿಸಲು ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿತ್ತು. ನಿತ್ಯ ಮಧ್ಯಾಹ್ನ ಆನೆಗಳನ್ನು ಕಾಡಿಗೆ ಬಿಡಲಾಗುತ್ತದೆ. ಮರುದಿನ ಬೆಳಗ್ಗೆ ಆನೆಯನ್ನು ಕ್ಯಾಂಪ್ಗೆ ಕರೆತರಲಾಗುತ್ತದೆ. ಇದು ಇಲ್ಲಿನ ದೈನಂದಿನ ಕಾರ್ಯ. ಅದರಂತೆ ಭಾನುಮತಿ ಆನೆ ನೋಡಲು ಹೋದಾಗ ಸಿಬ್ಬಂದಿಗೆ ದಾರಿಯಲ್ಲಿ ರಕ್ತ ಬಿದ್ದಿರುವುದು ಕಂಡುಬಂದಿತ್ತು. ಆನೆ ಮರಿ ಹಾಕಿರಬಹುದು ಎಂದು ತಿಳಿದು ಸಮೀಪ ಹೋದಾಗ ಬಾಲದಲ್ಲಿ ರಕ್ತ ಕಾಣಿಸಿಕೊಂಡಿತ್ತು. ಇನ್ನೂ ಹತ್ತಿರ ಹೋಗಿ ನೋಡಿದಾಗ ಆನೆಯ ಬಾಲ ಬಹುತೇಕ ತುಂಡಾಗಿರುವುದು ತಿಳಿದುಬಂದಿತ್ತು.
ಕಿಡಿಗೇಡಿಗಳು ಬಾಲವನ್ನು ಸುಮಾರು 2 ಇಂಚು ಆಳದಷ್ಟು ಹರಿತ ಆಯುಧದಿಂದ ತುಂಡರಿಸಿದ್ದರು ಎಂದು ಅನುಮಾನ ವ್ಯಕ್ತವಾಗಿತ್ತು. ಸಿಬ್ಬಂದಿ ತಕ್ಷಣ ಆನೆಯನ್ನು ಕ್ಯಾಂಪ್ಗೆ ಕರೆದುಕೊಂಡು ಬಂದು ವೈದ್ಯ ವಿನಯ್ ಅವರಿಗೆ ಮಾಹಿತಿ ನೀಡಿದ್ದರು. ಡಾ.ವಿನಯ್ ಆನೆಯ ಬಾಲಕ್ಕೆ ಏಳು ಹೊಲಿಗೆ ಹಾಕಿ ಸೂಕ್ತ ಚಿಕಿತ್ಸೆ ನೀಡಿದ್ದರು.
ತನಿಖಾ ಸಮಿತಿ ರಚನೆ: ಘಟನೆ ಕುರಿತು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ್ ಮಾತನಾಡಿ, "ಗರ್ಭಿಣಿ ಆನೆ ಭಾನುಮತಿಯ ಬಾಲ ಕಟ್ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಆನೆ ಬಾಲವನ್ನು ಯಾರು ಹೀಗೆ ಮಾಡಿದರೆಂದು ತಿಳಿಯಲು ಎಸಿಎಫ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಲಾಗಿದೆ. ಆನೆ ಬಾಲವನ್ನು ಒಳಗಿನವರು ಯಾರಾದರೂ ಕಟ್ ಮಾಡಲು ಯತ್ನಿಸಿದರಾ, ಹೊರಗಡೆಯವರು ಬಂದು ಯತ್ನಿಸಿದರಾ ಅಥವಾ ಬಾಲ ಬಿದಿರಿನ ತುದಿಗೆ ತಗುಲಿ ಹೀಗೆ ಆಗಿದೆಯೇ ಎಂದು ತಿಳಿಯಲು ತನಿಖೆ ಮಾಡಲಾಗುತ್ತಿದೆ. ಶೀಘ್ರ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದ್ದರು.