ಶಿವಮೊಗ್ಗ :ಕೋವಿಡ್-19 ಸೋಂಕಿನ 3ನೇ ಅಲೆ ನಿಯಂತ್ರಿಸುವ ಸಂಬಂಧ ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಜಿಲ್ಲಾಧಿಕಾರಿಗಳಾದ ಕೆ ಬಿ ಶಿವಕುಮಾರ್ ಅವರು ಆಗಸ್ಟ್ 5ರಿಂದ 15ರವರೆಗೆ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದ್ದಾರೆ.
ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳು
• ಕೋವಿಡ್-19 ನಿಯಂತ್ರಿಸುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳು ಮತ್ತು ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ.
• ಅಂತರ್ ರಾಜ್ಯಗಳಿಂದ ಶಿವಮೊಗ್ಗ ಜಿಲ್ಲೆಗೆ ಬಸ್ ಅಥವಾ ವೈಯಕ್ತಿಕ ಸಾರಿಗೆ ಮೂಲಕ ಪ್ರವೇಶ ಪಡೆಯುವವರಿಗೆ ಕೋವಿಡ್ 2ನೇ ಡೋಸ್ ಲಸಿಕೆ ಪಡೆಯದಿದ್ದರೂ ಸಹ 72 ಗಂಟೆಗಳ ಒಳಗೆ ಮಾಡಿಸಿದ ಆರ್ಟಿಪಿಸಿಆರ್ ಪರೀಕ್ಷಾ ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕಾದ್ದನ್ನು ಕಡ್ಡಾಯಗೊಳಿಸಲಾಗಿದೆ.
• ಜಿಲ್ಲಾ ವ್ಯಾಪ್ತಿಯ ಎಲ್ಲಾ ಲಾಡ್ಜ್, ಹೋಟೆಲ್, ಹೋಂ ಸ್ಟೇ/ಅರಣ್ಯ ಇಲಾಖೆ ವಸತಿ ಗೃಹಗಳಲ್ಲಿ ತಂಗಲಿರುವವರು ಬುಕ್ಕಿಂಗ್ ಸಮಯದಲ್ಲಿ ಸದರಿ ಪ್ರವಾಸಿಗರು ಚೆಕ್‍ಇನ್ ದಿನದಿಂದ ಹಿಂದಿನ 72 ಗಂಟೆಗಳ ಒಳಗಾಗಿ ಮಾಡಿಸಿದ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು. ಅದನ್ನು ಹೋಟೆಲ್ ಮತ್ತು ತಂಗುದಾಣಗಳಲ್ಲಿ ಪ್ರವೇಶಿಸುವ ಸಮಯದಲ್ಲಿ ತರಬೇಕು ಎಂದು ಆದೇಶಿಸಲಾಗಿದೆ.