ಶಿವಮೊಗ್ಗ:ಇಲ್ಲಿನ ನಟೋರಿಯಸ್ ರೌಡಿ ಶೀಟರ್ ಬಚ್ಚನ್ ಅಲಿಯಾಸ್ ಬಚ್ಚಾ ಹಾಗೂ ಆತನ ಮೂವರು ಸಹಚರರು ನಿನ್ನೆ ರಾತ್ರಿ ಶಿವಮೊಗ್ಗದ ಸೆಂಟ್ರಲ್ ಜೈಲ್ನಲ್ಲಿ ಪಿನಾಯಿಲ್ ಕುಡಿದು ವಿಷ ಕುಡಿದಂತೆ ಹೈಡ್ರಾಮಾ ನಡೆಸಿದ್ದಾರೆ.
ಬಚ್ಚಾ ಹಾಗೂ ಆತನ ಸಹಚರರಾದ ನಾಸಿರ್, ಇಮ್ರಾನ್ ಹಾಗೂ ಶೋಯಬ್ ಅವರು ನಿನ್ನೆ ರಾತ್ರಿ ಜೈಲಿನಲ್ಲಿನ ಶೌಚಾಲಯದಲ್ಲಿ ಇರಿಸಿದ್ದ ಪಿನಾಯಿಲ್ ಕುಡಿದು ವಿಷ ಕುಡಿದವರಂತೆ ಒದ್ದಾಡಿ, ಜೈಲ್ನಲ್ಲಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಜೈಲಿನ ಸಿಬ್ಬಂದಿ ತಕ್ಷಣ ನಾಲ್ವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಬಚ್ಚಾನಿಗೆ ಅಷ್ಟೇನೂ ಸಮಸ್ಯೆಯಾಗದ ಕಾರಣ ಆತನನ್ನು ರಾತ್ರಿಯೇ ಜೈಲ್ಗೆ ವಾಪಸ್ ಕಳುಹಿಸಿದ್ದಾರೆ. ಉಳಿದಂತೆ ನಾಸೀರ್, ಶೋಯಬ್ ಹಾಗು ಇಮ್ರಾನ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯ ಜೈಲ್ ವಾರ್ಡ್ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಬಚ್ಚಾನಿಂದಾಗಿ ಮೂವರು ಡಿಎಆರ್ ಪೊಲೀಸರು ಅಮಾನತು..ಬಚ್ಚಾ ವಿಷ ಕುಡಿಯುವ ಒಂದೆರಡು ದಿನ ಮುನ್ನಾ ಜೈಲಿನಿಂದಲೇ ಶಿವಮೊಗ್ಗ ನಗರದ ಉದ್ಯಮಿಯೊಬ್ಬರಿಗೆ ಫೋನ್ನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಸಿಇಎನ್ ಪೊಲೀಸರು ತನಿಖೆಗೆಂದು ಹೋದಾಗ, ಆತನ ಬಳಿ ಮೊಬೈಲ್ ಲಭ್ಯವಾಗುತ್ತಿದ್ದಂತೆಯೇ ಬಚ್ಚಾ ಜೈಲ್ ಸೆಲ್ನಲ್ಲಿ ಹಾಕಿದ್ದ ಟ್ಯೂಬ್ ಲೈಟ್ ಒಡೆದು ಪುಡಿ ಮಾಡಿ ಮೈಗೆ ಹಚ್ಚಿಕೊಂಡಿದ್ದ. ಸಣ್ಣ ಪುಟ್ಟ ಗಾಯಳಾಗಿದ್ದರಿಂದ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು.
ಚಿಕಿತ್ಸೆ ಮುಗಿದ ನಂತರ ವಾಪಸ್ ಜೈಲ್ಗೆ ಹೋಗುವಾಗ ಬೈಪಾಸ್ ರಸ್ತೆ ಊರುಗಡೂರು ಬಳಿಯ ಶಾಪ್ನ ಮಾಲೀಕನಿಗೆ ಬೆದರಿಕೆ ಹಾಕಿದ್ದಾನೆ. ಹೀಗೆ ಬೆದರಿಕೆ ಹಾಕುವುದಕ್ಕೆ ಡಿ ಎ ಆರ್ ಪೊಲೀಸರು ಸಹಾಯ ಮಾಡಿದ್ದಾರೆ ಎಂದು ಎಎಸ್ಐ ಮಂಜುನಾಥ್, ಕಾನ್ಸ್ಟೇಬಲ್ಗಳಾದ ಅಶೋಕ್ ಹಾಗೂ ಬೀರೇಶ್ ಅವರನ್ನು ಎಸ್ಪಿ ಲಕ್ಷ್ಮೀ ಪ್ರಸಾದ್ ಅಮಾನತು ಮಾಡಿದ್ದಾರೆ. ಉಳಿದಂತೆ ಡ್ರೈವರ್ ಬಗ್ಗೆ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಲಾಗುತ್ತದೆ.