ಕರ್ನಾಟಕ

karnataka

ಶಿವಮೊಗ್ಗ: ಜಡಿಮಳೆಗೆ ಕೆಸರುಗದ್ದೆಯಾದ ರಸ್ತೆ; ಭತ್ತ ನಾಟಿ ಮಾಡಿ ಅವ್ಯವಸ್ಥೆಗೆ ಆಕ್ರೋಶ

By

Published : Jul 11, 2023, 7:26 AM IST

ಮಳೆಗೆ ಹದಗೆಟ್ಟ ರಸ್ತೆಯಲ್ಲಿ ಭತ್ತ ನಾಟಿ ಮಾಡಿದ ಜನರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೈಸೆ ಗ್ರಾಮದ ಕೆರೆಗದ್ದೆ ಎಂಬಲ್ಲಿ ನಡೆಯಿತು.

road-damaged-due-to-heavy-rains-women-vented-their-anger-by-planting-paddy
ಭಾರಿ ಮಳೆಗೆ ಹದಗೆಟ್ಟ ರಸ್ತೆ : ಭತ್ತ ನಾಟಿ ಮಾಡಿ ಆಕ್ರೋಶ ಹೊರಹಾಕಿದ ಮಹಿಳೆಯರು

ಹದಗೆಟ್ಟ ರಸ್ತೆಯಲ್ಲಿ ಭತ್ತ ನಾಟಿ

ಶಿವಮೊಗ್ಗ: ಸಂಪೂರ್ಣ ಹದಗೆಟ್ಟಿರುವ ರಸ್ತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಗ್ರಾಮದ ಮಹಿಳೆಯರು, ಸಮಸ್ಯೆ ಬಗೆಹರಿಸದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಈ ಘಟನೆ ನಡೆಯಿತು. ತಾಲೂಕಿನ ಬೈಸೆ ಗ್ರಾಮದ ಕೆರೆಗದ್ದೆಗೆ ತೆರಳಲು ಸರಿಯಾದ ರಸ್ತೆ ಸೌಕರ್ಯ ಇಲ್ಲ. ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಇದೆ. ಹೀಗಾಗಿ ಮಹಿಳೆಯರು ಸೇರಿ ಹದಗೆಟ್ಟ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಪ್ರತಿಭಟಿಸಿದರು.

ಕಳೆದ ಕೆಲವು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಹಲವೆಡೆ ರಸ್ತೆಗಳು ಹದಗೆಟ್ಟಿವೆ. ಮಳೆಗೆ ಬೈಸೆ ಸೇತುವೆಯಿಂದ ಕೆರೆಗದ್ದೆಗೆ ಹೋಗುವ ರಸ್ತೆ ಅಕ್ಷರಶಃ ಕೆಸರುಗದ್ದೆಯಂತಾಗಿದೆ. ರೈತರು, ಶಾಲಾ ಮಕ್ಕಳು, ವೃದ್ಧರು ಸಂಚರಿಸಲು ಕಷ್ಟವಾಗಿದೆ. ಆರೋಗ್ಯ ತುರ್ತು ಸಂದರ್ಭಗಳಲ್ಲಿ ಇಲ್ಲಿನ ಜನರ ಸಂಕಟ ಹೇಳತೀರದು.

ಕೆರೆಗದ್ದೆ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ ಅನುದಾನದ ಮೀಸಲಿಟ್ಟು ಚುನಾವಣೆಗೆ ಮುನ್ನ ಶಂಕುಸ್ಥಾಪನೆ ಮಾಡಲಾಗಿತ್ತು. ರಸ್ತೆ ಮೇಲೆ ಮಣ್ಣು ಹಾಕಿ ಕಾಮಗಾರಿ ಆರಂಭಿಸಲಾಗಿತ್ತು. ಚುನಾವಣೆ ಬಳಿಕ ಸ್ಥಗಿತಗೊಂಡ ರಸ್ತೆ ಕಾಮಗಾರಿ ಎರಡು ತಿಂಗಳು ಕಳೆದರೂ ಮತ್ತೆ ಪ್ರಾರಂಭವಾಗಿಲ್ಲ. ರಸ್ತೆಗೆ ಗ್ರಾವೆಲ್ ಮಣ್ಣು ಹಾಕಬೇಕಿತ್ತು. ಆದರೆ ಹತ್ತಿರದಲ್ಲೇ ಇದ್ದ ಕೆಂಪು ಮಣ್ಣನ್ನು ರಸ್ತೆಗೆ ಹಾಕಲಾಗಿದೆ. ಇದೀಗ ಧಾರಾಕಾರ ಮಳೆಯಿಂದಾಗಿ ರಸ್ತೆ ಹದಗೆಟ್ಟು ಸಂಪೂರ್ಣ ಕೆಸರುಗದ್ದೆಯಾಗಿದೆ. ರಸ್ತೆಯಲ್ಲಿ ಕಾಲು ಹುಗಿಯುತ್ತಿದ್ದು ಓಡಾಡಲು ತೊಂದರೆಯಾಗಿದೆ ಎನ್ನುವುದು ಗ್ರಾಮಸ್ಥರ ದೂರು. ಗ್ರಾಮಸ್ಥರೇ ಸ್ವಂತ ವೆಚ್ಚದಲ್ಲಿ ಅರ್ಧ ಕಿಮೀ ರಸ್ತೆಯ ಮೇಲಿನ ಮಣ್ಣನ್ನು ತೆರವುಗೊಳಿಸುವ ಕಾರ್ಯವನ್ನೂ ಮಾಡಿದ್ದಾರೆ.

ಪ್ರತಿಭಟನೆ ನಡೆಸಿ ಮಾತನಾಡಿದ ಗ್ರಾಮದ ಮಹಿಳೆಯರು, "ಚುನಾವಣೆ ಬಳಿಕ ಜನಪ್ರತಿನಿಧಿಗಳ ಪತ್ತೆ ಇಲ್ಲ. ಗುತ್ತಿಗೆದಾರರ ಸುಳಿವೂ ಇಲ್ಲ. ಇದನ್ನು ನೋಡಿ ನೋಡಿ ನಮಗೆ ಸಾಕಾಗಿ ಹೋಗಿದೆ. ಹಾಗಾಗಿ ತುರ್ತಾಗಿ ರಸ್ತೆಗೆ ಜಲ್ಲಿ ಹಾಕಿ ಗ್ರಾಮಸ್ಥರಿಗೆ ಸಂಚರಿಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯತ್​​ ಮುಂದೆ ಸತ್ಯಾಗ್ರಹ ನಡೆಸುತ್ತೇವೆ. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಮನೆ ಮುಂದೆ ಧರಣಿ ನಡೆಸುತ್ತೇವೆ" ಎಂದು ಎಚ್ಚರಿಸಿದರು.

"ಚುನಾವಣೆ ಮೊದಲು ಬಂದು ರಸ್ತೆಗೆ ಗುದ್ದಲಿ ಪೂಜೆ ಮಾಡಿ ಹೋದರು. ರಸ್ತೆ ದುರಸ್ತಿ ಮಾಡಲು ಜಲ್ಲಿ ತಂದುಹಾಕಿದ್ದಾರೆ. ಸೈಕಲ್ ಕೂಡ ಹೋಗಲಾರದ ರಸ್ತೆಯಲ್ಲಿ ವಾಹನಗಳು ಹೇಗೆ ಬರುತ್ತೆ.? ನಡೆದುಕೊಂಡು ಹೋದರೆ ಕೆಸರು ಹತ್ತುತ್ತದೆ. ಮಳೆಗಾಲದಲ್ಲಂತೂ ಓಡಾಡಲೂ ಸಾಧ್ಯವೇ ಇಲ್ಲ. ಚುನಾವಣೆ ಈ ಸಂದರ್ಭದಲ್ಲಿ ಇರಬೇಕಿತ್ತು. ಆಗ ಜನರ‌ ಕಷ್ಟ ಏನು ಅರ್ಥ ಆಗುತ್ತಿತ್ತು. ರಸ್ತೆ ಹದೆಗೆಟ್ಟಿರುವುದರಿಂದ ಪಟ್ಟಣಕ್ಕೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ರಸ್ತೆಯನ್ನು ಸರಿಪಡಿಸಬೇಕು" ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಇದನ್ನೂ ಓದಿ :ಗುಡ್ಡ ಕುಸಿಯುವ ಭೀತಿ: ಕುಕ್ಕೆ ಸುಬ್ರಹ್ಮಣ್ಯದ 8 ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ABOUT THE AUTHOR

...view details