ಶಿವಮೊಗ್ಗ: ರಸ್ತೆ ನಿರ್ಮಾಣ ಮಾಡಿದ ನಾಲ್ಕೇ ತಿಂಗಳಿಗೆ ಕಿತ್ತು ಹೋದ ಘಟನೆ ಹೊಸನಗರ ತಾಲೂಕಿನ ಗವಟೂರು ಗ್ರಾಮದಲ್ಲಿ ನಡೆದಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸುಮಾರು 4.41 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ತಿಂಗಳ ಹಿಂದಷ್ಟೆ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಗವಟೂರು- ಮಾವಿನಸರ ನಡುವಿನ ರಸ್ತೆ ಕಾಮಗಾರಿ ಇದ್ದಾಗಿದ್ದು, ಕಳಪೆ ಕಾಮಗಾರಿ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಯಲ್ಲೆ ಕೀಳಬಹುದಾದ ರಸ್ತೆ:ರಸ್ತೆ ಎಷ್ಟು ಕಳಪೆಯಾಗಿದೆ ಎಂದರೆ, ರಸ್ತೆ ಕೈಯಲ್ಲೇ ಕೀಳಬಹುದಾಗಿದೆ. ಡಾಂಬಾರು ರಸ್ತೆ ಎಂದರೆ ಸರಿ ಸುಮಾರು ಹತ್ತಾರು ವರ್ಷಗಳ ಕಾಲ ಬಾಳಿಕೆ ಬರಬೇಕು. ಆದರೆ, ಇಲ್ಲಿ ರಸ್ತೆ ನಿರ್ಮಾಣದ ನಾಲ್ಕು ತಿಂಗಳಿಗೆ ಕಿತ್ತು ಹೋಗಿದೆ, ಎಂದರೆ ಕಾಮಗಾರಿ ಯಾವ ಗುಣಮಟ್ಟದಲ್ಲಿದೆ ಎಂಬುದು ಕಂಡು ಬಂದಿದೆ.