ಶಿವಮೊಗ್ಗ: ಕಳೆದ ವರ್ಷದ ಕೊನೆಯಲ್ಲಿ ಸಾಲು ಸಾಲು ಸರಗಳ್ಳತನ ಪ್ರಕರಣ ನಡೆದಿದ್ದರೂ ಜಿಲ್ಲೆಯಲ್ಲಿ ಈ ವರ್ಷದ ಆರಂಭದಿಂದಲೂ ಕೊರೊನಾ, ಲಾಕ್ಡೌನ್ ಮತ್ತಿತರ ಕಾರಣಗಳಿಂದಾಗಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಾಕಷ್ಟು ಬ್ರೇಕ್ ಬಿದ್ದಿತ್ತು.
ಆದ್ರೇ, ಇದೀಗ ಜಿಲ್ಲೆಯಲ್ಲಿ ಮತ್ತೊಮ್ಮೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿರುವ ಹಿನ್ನೆಲೆ ಜನಸಾಮಾನ್ಯರು ನಿರಾತಂಕವಾಗಿ ಸಂಚಾರ ಮಾಡುವ ಪರಿಸ್ಥಿತಿಯೇ ಇಲ್ಲದಂತಾಗಿದೆ. ಗೃಹ ಸಚಿವರ ತವರು ಜಿಲ್ಲೆಯ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ಕೊರೊನಾ, ಲಾಕ್ಡೌನ್ ಮತ್ತಿತರ ಕಾರಣಗಳಿಂದಾಗಿ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಬಿದ್ದಿತ್ತು. ಈಗ ಮತ್ತೆ ಜಿಲ್ಲೆಯಲ್ಲಿ ಕ್ರೈಂ ರೇಟ್ ಜಾಸ್ತಿಯಾಗುತ್ತಿವೆ. ಗಾಂಜಾ ಸೇವನೆ, ಮೊಬೈಲ್ ಕಳ್ಳತನ, ಸರಗಳ್ಳತನ ಮಾಡುವ ಖದೀಮರ ಕಾಟ ಹೆಚ್ಚಾಗಿದೆ. ಜನಸಾಮಾನ್ಯರು, ಮಹಿಳೆಯರು ಒಂಟಿಯಾಗಿ ಸಂಚರಿಸಲು ಭಯ ಪಡುತ್ತಿದ್ದಾರೆ.
ಪ್ರಮುಖವಾಗಿ ಮೊಬೈಲ್ನಲ್ಲಿ ಮಾತನಾಡುತ್ತಾ ಒಂಟಿಯಾಗಿ ಸಂಚರಿಸುವವರನ್ನೇ ಟಾರ್ಗೆಟ್ ಮಾಡುತ್ತಿರುವ ಖದೀಮರು ಹಿಂಬದಿಯಿಂದ ಬೈಕ್ನಲ್ಲಿ ಬಂದು ಮೊಬೈಲ್, ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಈ ಸಂಬಂಧ ನಗರದ ಜಯನಗರ ಠಾಣೆ, ದೊಡ್ಡಪೇಟೆ ಠಾಣೆ, ಗ್ರಾಮಾಂತರ, ತುಂಗಾನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಇನ್ನು, ಕೇವಲ ಮೊಬೈಲ್, ಚಿನ್ನಾಭರಣ ಮಾತ್ರವಲ್ಲದೇ ಮನೆಯ ಮುಂದೆ ನಿಲ್ಲಿಸಿರುವ ಸೈಕಲ್, ಬೈಕ್ಗಳ ಕಳ್ಳತನ ಪ್ರಕರಣ ಸಹ ಇತ್ತೀಚಿಗೆ ಹೆಚ್ಚಾಗಿವೆ. ಜೊತೆಗೆ ನಗರದ ಪ್ರಮುಖ ಬಡಾವಣೆಗಳನ್ನು ಟಾರ್ಗೆಟ್ ಮಾಡುತ್ತಿರುವ ಖದೀಮರ ಗ್ಯಾಂಗ್, ಮನೆಗಳ್ಳತನ, ಸರಗಳ್ಳತನ, ಮೊಬೈಲ್ ಕಳ್ಳತನ ಮಾಡುತ್ತಿದ್ದಾರೆ.
ಗೃಹ ಸಚಿವರ ತವರು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕ್ರೈಂ ರೇಟ್ : ಇದಕ್ಕೆ ಮುಕ್ತಿ ಯಾವಾಗ? ಇಷ್ಟೆಲ್ಲಾ ಪ್ರಕರಣಗಳ ಬಗ್ಗೆ ಮಾಹಿತಿ ಇದ್ದರೂ ಪೊಲೀಸ್ ಇಲಾಖೆ ಮಾತ್ರ ಕಾರ್ಯಪ್ರವೃತ್ತವಾಗಿಲ್ಲ. ನೈಟ್ ಬೀಟ್ಗಳನ್ನು ಹೆಚ್ಚಿಸಿಲ್ಲ. ಹಾಗಾಗಿ, ನಗರದ ಗೋಪಾಲಗೌಡ ಬಡಾವಣೆಯ ಜನರು ತಮ್ಮ ರಕ್ಷಣೆಗೆ ತಾವೇ ಸ್ವತಃ ತಂಡವನ್ನು ರಚಿಸಿಕೊಂಡು ರಾತ್ರಿ ವೇಳೆಯಲ್ಲಿ ಬಡಾವಣೆಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಆ ಮೂಲಕ ಪೊಲೀಸ್ ಇಲಾಖೆಯ ಕಾರ್ಯವೈಖರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗೃಹ ಸಚಿವರ ತವರು ಜಿಲ್ಲೆಯಲ್ಲೇ ಕಾನೂನು ಬಾಹಿರ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗಿರುವ ಸಂಬಂಧ ಸಾರ್ವಜನಿಕರಿಂದ ವ್ಯಾಪಕ ದೂರು ಬರುತ್ತಿವೆ. ಹಾಗಾಗಿ, ಪೊಲೀಸರು ಶೀಘ್ರವೇ ಖದೀಮರನ್ನು ಬಂಧಿಸಿ, ಸಾರ್ವಜನಿಕರ ಓಡಾಟಕ್ಕೆ ಮುಕ್ತ ವಾತಾವರಣ ನಿರ್ಮಿಸಲಿ ಎಂಬುದು ಸಾರ್ವಜನಿಕರ ಆಶಯ.