ಶಿವಮೊಗ್ಗ: ಶಬರಿಮಲೆ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ಶಿವಮೊಗ್ಗ ಜಿಲ್ಲೆ ವತಿಯಿಂದ ದೇಶದಲ್ಲಿಯೇ ಪ್ರಥಮ ಭಾರಿ ಮುಷ್ಟಿ ಅಕ್ಕಿ ಅಭಿಯಾನ ನಡೆಸಲಾಗಿದೆ. ಈ ಅಭಿಯಾನದಿಂದ ಶಬರಿಮಲೆಯಲ್ಲಿ ಪ್ರಸಾದವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.
ಇದಕ್ಕಾಗಿ ಶಿವಮೊಗ್ಗ ಜಿಲ್ಲೆಯಿಂದ 35 ಸಾವಿರ ಕೆ.ಜಿ ಅಕ್ಕಿಯನ್ನು ಹಾಗೂ 5 ಸಾವಿರ ಕೆ.ಜಿ ಬೆಲ್ಲ, ಬೇಳೆಯನ್ನು ಸಂಗ್ರಹಿಸಲಾಗಿದೆ. ಇದನ್ನು ಎರಡು ಲಾರಿಗಳ ಮೂಲಕ ಶಬರಿಮಲೆಗೆ ಕಳುಹಿಸಲಾಗುತ್ತದೆ. ಇಂದು ವಿತರಣಾ ಕಾರ್ಯಕ್ರಮವನ್ನು ಶುಭಂಮಂಗಳ ಸಮುದಾಯ ಭವನದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿತರಣಾ ಕಾರ್ಯಕ್ರಮವನ್ನು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭಿಮೇಶ್ವರ ಜೋಶಿರವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಅಕ್ಕಿಯ ಅಭಿಯಾನ ಬಹಳ ವಿಶಿಷ್ಟತೆಯನ್ನು ತಂದು ಕೊಟ್ಟಿದೆ. ಇದರ ಹಿಂದೆ ಇರುವ ತತ್ತ್ವ, ದರ್ಶನ ಹಾಗೂ ಆದರ್ಶ ಇದನ್ನು ನಾವೆಲ್ಲಾ ಮನಗಾಣಬೇಕಿದೆ. ಒಂದು ಮುಷ್ಟಿ ಅಕ್ಕಿಯನ್ನು ಯಾವ ದೇವರಿಗೆ, ಯಾವ ಗುರುಗಳಿಗೆ ಎತ್ತಿಡುತ್ತಿರೋ, ಅದನ್ನು ಅವರಿಗೆ ತಲುಪಿಸುವ ಕೆಲಸವಾಗುತ್ತದೆ.
ನಾವು ಎತ್ತಿಟ್ಟಿದ್ದು ತಲುಪಿಸುವುದರ ಜೊತೆಗೆ ಅಲ್ಲಿ ಎಷ್ಟರ ಮಟ್ಟಿಗೆ ವಿನಿಯೋಗವಾಗುತ್ತದೆ ಎಂಬುದು ಮುಖ್ಯವಾಗುತ್ತದೆ. ಕಾಂತೇಶ್ ಅವರು ಮಾಡಿದ ಈ ಮುಷ್ಟಿ ಅಕ್ಕಿ ಅಭಿಯಾನ ಭಾರತದಲ್ಲಿಯೇ ಪ್ರಥಮವಾಗಿದೆ ಇದಕ್ಕೆ ನಿಮಗೆ ಅಭಿನಂದನೆಗಳು ಎಂದರು.