ಶಿವಮೊಗ್ಗ:ಶಿವಮೊಗ್ಗದ ಪ್ರಸಿದ್ಧ ಮಾರಿಕಾಂಬ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರಲು ಕೆಲವು ಹಿಂದೂ ಸಂಘಟನೆಗಳು ಮುಂದಾಗಿವೆ ಎನ್ನಲಾಗ್ತಿದೆ. ಹಿಂದೂ ಸಂಘಟನೆಗಳ ಈ ನಿರ್ಧಾರ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಹಿಂದೂ ಸಂಘಟನೆಯ ಮುಖಂಡರು ನಿರ್ಧಾರವನ್ನು ಸಮರ್ಥಿಸಿಕೊಂಡರೆ, ಇನ್ನೊಂದೆಡೆ, ಇದೊಂದು ಬಡ ವ್ಯಾಪಾರಿಗಳ ಬದುಕಿಗೆ ತೊಂದರೆ ತಂದೊಡ್ಡುವ ನಿರ್ಧಾರ ಎಂಬ ಮಾತುಗಳು ಕೇಳಿಬಂದಿವೆ.
ಜಾತ್ರೆಯ ಟೆಂಡರ್ ಪಡೆದ ಹಿಂದೂ ಕಾರ್ಯಕರ್ತ: ಮಾರಿಕಾಂಬ ಜಾತ್ರೆಯ ಮಳಿಗೆ ಹರಾಜು ಗುತ್ತಿಗೆಯನ್ನು ಮೊದಲು ಚಿಕ್ಕಣ್ಣ ಎಂಬಾತ 9 ಲಕ್ಷದ 1001 ರೂ. ಗೆ ಪಡೆದುಕೊಂಡಿದ್ದರು. ಆದರೆ, ದುಷ್ಕರ್ಮಿಗಳಿಂದ ತನಗೆ ಜೀವ ಬೆದರಿಕೆ ಇದೆ. ಈ ಟೆಂಡರ್ ತನಗೆ ಬೇಡ ಅಂತಾ ಚಿಕ್ಕಣ್ಣ ಮಾರಿಕಾಂಬ ಸೇವಾ ಸಮಿತಿಗೆ ಹೇಳಿದ್ದರು. ಹಾಗಾಗಿ ಈ ಗುತ್ತಿಗೆಯನ್ನು ಹಿಂದೂ ಸಂಘಟನೆಯ ನಾಗರಾಜ್ ಎಂಬವರು ಪಡೆದುಕೊಂಡಿದ್ದಾರೆ ಎಂದು ಸೇವಾ ಸಮಿತಿಯ ಅಧ್ಯಕ್ಷ ಎಸ್ ಕೆ ಮರಿಯಪ್ಪ ಹೇಳಿದ್ದಾರೆ.