ಶಿವಮೊಗ್ಗ: ತೆರೆದ ಬಾವಿಗೆ ಬಿದ್ದಿದ್ದ ಕಾಡುಕೋಣವನ್ನು ರಕ್ಷಣೆ ಮಾಡಲಾಗಿದೆ. ಸಾಗರ ತಾಲೂಕು ಚಿಪ್ಪಲಿ ಲಿಂಗದಹಳ್ಳಿಯ ಜೇನು ಕೃಷಿ ಕಟ್ಟಡದ ಬಳಿ ಇರುವ ತೆರೆದ ಬಾವಿಗೆ ಕಾಡುಕೋಣ ಬಿದ್ದಿತ್ತು. ಈ ಬಾವಿಯು ಸುಮಾರು 25 ಅಡಿ ಆಳದ್ದಾಗಿದ್ದು, ರಸ್ತೆ ದಾಟುವಾಗ ಎರಡು ಕಾಡೆಮ್ಮೆಗಳು ಕೃಷಿ ಕಟ್ಟಡದ ಕಾಂಪೌಂಡ್ ಮೇಲೆ ಜಿಗಿದಿವೆ. ಈ ವೇಳೆ, ದೊಡ್ಡ ಕಾಡುಕೋಣ ಜೋರಾಗಿ ಜಿಗಿದು ಓಡಿ ಹೋಗಿದೆ. ಆದರೆ, ಸುಮಾರು 9 ವರ್ಷ ಪ್ರಾಯದ ಸಣ್ಣ ಕಾಡುಕೋಣ ತೆರೆದ ಬಾವಿ ಒಳಗೆ ಬಿದ್ದಿದ್ದು, ಇದನ್ನು ಕಂಡ ಗ್ರಾಮಸ್ಥರು ಪರಿಸರವಾದಿಗಳಾದ ಅಖಿಲೇಶ್ ಚಿಪ್ಲಿ ಅವರಿಗೆ ವಿಚಾರ ಮುಟ್ಟಿಸಿ ಕಾಡುಕೋಣವನ್ನು ರಕ್ಷಣೆ ಮಾಡಿದ್ದಾರೆ.
ಅಖಿಲೇಶ್ ಚಿಪ್ಲಿ ಅವರು ತಕ್ಷಣ ಅರಣ್ಯ ಮತ್ತು ಅಗ್ನಿಶಾಮಕದಳ ದವರಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದವರು ಕೆಳಗೆ ಇಳಿದು ಕಾಡುಕೋಣವನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದರು, ಆದರೆ ಅದು ಸಾಧ್ಯವಾಗಲಿಲ್ಲ. ಬಾವಿ ಒಳಗೆ ಇದ್ದ ಕೋಣವು ಸುಮಾರು 8 ಟನ್ ತೂಕ ಹೊಂದಿದ್ದು, ಧೈರ್ಯ ಮಾಡಿ ಬಾವಿ ಒಳಗೆ ಇಳಿದು ಮೇಲಕ್ಕೆ ಎತ್ತಲು ಹೋದ್ರೆ ಅದು ತಪ್ಪಿಸಿಕೊಂಡು ಕೆಳಗೆ ಬೀಳುವ ಸಾಧ್ಯತೆ ಇತ್ತು.
ಈ ಹಿನ್ನೆಲೆ ಕಾಡುಕೋಣದ ಪ್ರಜ್ಞೆ ತಪ್ಪಿಸಬೇಕೆಂದು ಸಾಗರದ ಡಿಎಫ್ಒ ಅಧಿಕಾರಿಗಳು ಶಿವಮೊಗ್ಗದ ಸಿಸಿಎಫ್ ಅವರನ್ನು ಸಂಪರ್ಕ ಮಾಡಿ ಪ್ರಾಣಿಗಳಿಗೆ ಅರವಳಿಕೆ ನೀಡುವವರನ್ನು ಕರೆಯಿಸಿ ಎಂದು ಮಾಡಿದ ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಶಿವಮೊಗ್ಗ ಹುಲಿ ಮತ್ತು ಸಿಂಹಧಾಮದ ವೈದ್ಯ ಮುರುಳಿ ಮೋಹನ್ ಅವರನ್ನು ಚಿಪ್ಪಳ್ಳಿಗೆ ಕಳುಹಿಸಿದ್ದರು.
ಸ್ಥಳಕ್ಕೆ ಬಂದ ಡಾ.ಮುರುಳಿ ಮೋಹನ್ ಕಾಡುಕೋಣದ ತೂಕಕ್ಕೆ ಅನುಗುಣವಾಗಿ ಅರವಳಿಕೆ ನೀಡಿ ಪ್ರಜ್ಞೆ ತಪ್ಪಿಸಿದಾಗ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿ ಒಳಗೆ ಇಳಿದು ಕೋಣಕ್ಕೆ ಹಗ್ಗ ಕಟ್ಟಿ, ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಿದರು. ವೈದ್ಯರು ನೀಡಿದ ಅರವಳಿಕೆಯು ಕೇವಲ ಮೂಕ್ಕಾಲು ಗಂಟೆ ಮಾತ್ರ ಇರಲಿದ್ದು, ಅಷ್ಟರ ಒಳಗಾಗಿ ಕಾಡುಕೋಣವನ್ನು ಮೇಲಕ್ಕೆ ಎತ್ತಬೇಕು ಎಂದಾಗ ಅಗ್ನಿ ಶಾಮಕದಳದವರು ತ್ವರಿತವಾದ ಕಾರ್ಯಾಚರಣೆ ನಡೆಸಿ ಸುಮಾರು 40 ನಿಮಿಷಗಳಲ್ಲಿ ಕೆಲಸ ಪೂರ್ಣಗೊಳಿಸಿದರು. ಕಾಡೆಮ್ಮೆ ಮೇಲಕ್ಕೆ ತಂದು ಹಗ್ಗ, ಬೆಲ್ಟ್ ತೆಗೆಯುವಷ್ಟರಲ್ಲಿ ಅದಕ್ಕೆ ಪ್ರಜ್ಞೆ ಬಂದಿದ್ದು, ಅರೆ ಪ್ರಜ್ಞೆಯಲ್ಲೇ ಕಾಡಿನತ್ತ ಓಡಿ ಹೋಯಿತು.