ಶಿವಮೊಗ್ಗ:ಜಿಲ್ಲೆಯ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿ ಜಿಲ್ಲಾ ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಘೋಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಭ್ರಷ್ಟಾಚಾರ ವಿರೋಧಿ ವೇದಿಕೆ ಮನವಿ ಸಲ್ಲಿಸಿದೆ.
ಅಲ್ಲದೇ ರಾಜ್ಯದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರ ಸೇವಾ ಅವಧಿಯನ್ನು 60 ವರ್ಷದಿಂದ 65 ವರ್ಷಕ್ಕೆ ವಿಸ್ತರಿಸಬೇಕೆಂದು ಕೂಡ ಮನವಿ ಮಾಡಿದ್ರು. ಸರ್ಕಾರಿ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಬೇಕು. ತಾಲೂಕು ಆಸ್ಪತ್ರೆಗೆ ಜಿಲ್ಲೆಯ ಸೊರಬ, ಆನವಟ್ಟಿ, ಶಿರಾಳಕೊಪ್ಪ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು, ರಟ್ಟಿಹಳ್ಳಿ, ಮಾಸೂರು ಹಾಗೂ ಇನ್ನಿತರ ಪ್ರದೇಶಗಳಿಂದ ಸಾಕಷ್ಟು ರೋಗಿಗಳು ಬರುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಸರ್ವತೋಮುಖ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗೆ ಮನವಿ.. ಆದರೆ, ಆಸ್ಪತ್ರೆಯಲ್ಲಿ ಸಮರ್ಪಕ ಸೌಲಭ್ಯ ಕೊರತೆಯಿದೆ. ಹಾಗಾಗಿ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಮೂಲಸೌಲಭ್ಯಗಳನ್ನು ಒದಗಿಸಬೇಕು. ಈಗ ಇರುವ 150 ರಿಂದ 400 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಬೇಕು. ಆಸ್ಪತ್ರೆಗೆ ನೂತನವಾಗಿ 3 ರಿಂದ 4 ಆ್ಯಂಬುಲೆನ್ಸ್‌ಗಳನ್ನ ಒದಗಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ಅಲ್ಲದೇ ಹೆಚ್ಚು ಸಿಬ್ಬಂದಿಯನ್ನು ಒದಗಿಸಬೇಕು. ತೀವ್ರ ನಿಗಾ ಘಟಕಗಳನ್ನು ಹೆಚ್ಚು ನಿರ್ಮಾಣ ಮಾಡಬೇಕು. ಡಯಾಲಿಸಿಸ್ ಘಟಕಗಳನ್ನು ಅಭಿವೃದ್ಧಿ ಪಡಿಸಬೇಕು. ಎಲ್ಲಾ ರೀತಿಯ ಮೂಲ ಸೌಕರ್ಯ ಒದಗಿಸುವ ಮೂಲಕ ಬಡ ರೋಗಿಗಳಿಗೆ ಅನುಕೂಲ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.