ಶಿವಮೊಗ್ಗ: ಕೋವಿಡ್ ಸೋಂಕಿತರ ಜೊತೆ ಆಸ್ಪತ್ರೆಯಲ್ಲಿ ತಂಗಲು ಒಬ್ಬರಿಗೆ ಅವಕಾಶ ನೀಡಬೇಕೆಂದು ಮೆಗ್ಗಾನ್ ಆಸ್ಪತ್ರೆ ಮುಂಭಾಗ ಸೋಂಕಿತರ ಸಂಬಂಧಿಕರು ಪಿಪಿಇ ಕಿಟ್ ಹಿಡಿದು ಆಗ್ರಹಿಸಿದ್ದಾರೆ.
ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಜೊತೆ ಓರ್ವರು ಸಹಾಯಕರಾಗಿ ಇರಲೇಬೇಕಾದ ಅನಿವಾರ್ಯತೆ ಇದೆ. ಸೋಂಕಿತರು ಶೌಚಾಲಯಕ್ಕೆ ಹೋಗಲು, ಊಟ ಮಾಡಿಸುವುದು ಸೇರಿದಂತೆ ಇತರೆ ಸಹಾಯಕ್ಕೆ ಇರಲೇಬೇಕಿದೆ.
ನರ್ಸ್‌ಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಮಾತ್ರೆ ಔಷಧಿ ನೀಡುವುದಕ್ಕಾದರೂ ನಾವು ಇರಲೇಬೇಕಿದೆ. ಆದರೆ, ಆಸ್ಪತ್ರೆ ಸಿಬ್ಬಂದಿ ನಮ್ಮನ್ನು ಒಳಗೆ ಹೋಗಲು ಬಿಡುವುದಿಲ್ಲ. ಹೀಗೆ ಆದರೆ ನಮ್ಮ ತಂದೆ- ತಾಯಿ, ಸಹೋದರರು ಹಾಗೂ ಸಂಬಂಧಿಕರನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ನಮಗೆ ಒಳಗೆ ಹೋಗಲು ಅವಕಾಶ ನೀಡಿ ಎಂದು ಆಗ್ರಹಿಸಿದರು.