ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ಶಿವಮೊಗ್ಗ:ಇಷ್ಟು ದಿನ ಭಾರತ ಹಾಗೂ ಇಂಡಿಯಾ ಸರಿಯಾಗಿಯೇ ಇತ್ತು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಲಗಾಮನ್ನು ದೆಹಲಿಯಿಂದ ಹಿಡಿಯಲು ಪ್ರಾರಂಭಿಸಿದ್ದಾರೆ. ಇಂತಹ ಕೇಂದ್ರದ ನೀತಿಗಳಿಗೆ ನಮ್ಮ ವಿರೋಧವಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿಕಾರಿಪುರದ ಅಂಬಾರಗೊಪ್ಪ ಗ್ರಾಮದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದವರು ಜಿಎಸ್ಟಿಯನ್ನು ನಮ್ಮಿಂದ ಪಡೆದು ನಮಗೆ ವಾಪಸ್ ನೀಡುವಾಗ ಭಿಕ್ಷೆ ರೂಪದಲ್ಲಿ ನೀಡಿದರೆ ಅದು ಯಾವ ನ್ಯಾಯ? ಎಂದರು. ಶಿಕ್ಷಣದಲ್ಲಿ ಕೇಸರೀಕರಣ ಮಾಡುವುದು ಸರಿ ಅಲ್ಲ. ಭಾವನಾತ್ಮಕವಾಗಿ ಲಗಾಮು ಹಾಕುವುದನ್ನು ಕೇಂದ್ರದವರು ಬದಿಗಿಡಬೇಕು. ಲಗಾಮು ಮಕ್ಕಳಿಗೆ ಒಳ್ಳೆಯದನ್ನು ಮಾಡುವವರ ಕೈಯಲ್ಲಿ ಇರಬೇಕು. ಅದು ಈಗ ನಮ್ಮ ಸರ್ಕಾರದ ಬಳಿ ಇದೆ. ಇದರಿಂದ ಮಕ್ಕಳಿಗೆ ಒಳ್ಳೆದಾಗುತ್ತದೆ ಎಂದರು.
ಭಾರತ ಮತ್ತು ಇಂಡಿಯಾ ಚರ್ಚೆಯಲ್ಲೇ ಇರಲಿಲ್ಲ. ಇತ್ತೀಚೆಗೆ ಚರ್ಚೆಗೆ ಬಂತು. ಇಂದು ಮಾಧ್ಯಮಗಳಲ್ಲಿ ಬಂದಿದೆ. ಭಾರತವನ್ನು ಒಪ್ಪೋಣ, ಇಂಡಿಯಾವನ್ನೂ ಒಪ್ಪೋಣ. ಈಗ ಬಿಜೆಪಿಯವರು ಮಹಾತ್ಮರನ್ನು ಬದಲಾಯಿಸಿ ಬಿಡುತ್ತಿದ್ದಾರೆ. ಅದು ಆಗಬಾರದು, ಸಂಪ್ರದಾಯ ಇರಬೇಕು. ಇದಕ್ಕೆ ರಾಜ್ಯ ಶಿಕ್ಷಣ ನೀತಿ ಇರಬೇಕು. ಇಲ್ಲಿ ನಮ್ಮ ವ್ಯವಸ್ಥೆ, ನಮ್ಮ ಸಂಪ್ರದಾಯ ಇರುತ್ತದೆ.
ಕರ್ನಾಟಕದಲ್ಲಿ ಕನ್ನಡ ಭಾಷೆ, ಬೇರೆ ರಾಜ್ಯದಲ್ಲಿ ಬೇರೆ ಭಾಷೆ ಇದೆ. ಇಲ್ಲ ಎಲ್ಲರೂ ಹಿಂದಿ ಕಲಿಯಬೇಕು ಅಂದ್ರೆ, ನಾನು ಬೇಡ ಅನ್ನೋದಿಲ್ಲ. ಆದರೆ ನಾವು ನಮ್ಮ ಕನ್ನಡವನ್ನು ಬಿಟ್ಟು ಕೊಡಬೇಕಾ. ಆಯಾ ರಾಜ್ಯದ ಭಾಷೆಯೇ ಅಲ್ಲಿರಬೇಕು. ದೇಶದಲ್ಲಿ ಹಿಂದಿ ಇರಬೇಕು, ನಮ್ಮ ಅಭ್ಯಂತರವಿಲ್ಲ. ಆದರೆ ಈಗ ಕಾನೂನು ಮಾಡಿದ್ರೆ, ಅದಕ್ಕೆ ನಾವೆಲ್ಲಾ ತಲೆಬೇಕಾಗುತ್ತದೆ. ಕಾನೂನನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಾರೆ, ಇದು ಸರಿಯಲ್ಲ ಎಂದು ಮಧುಬಂಗಾರಪ್ಪ ತಿಳಿಸಿದರು.
ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ: ಈ ಬಾರಿ 68 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.. 2 ದಿನದಲ್ಲಿ ಪಟ್ಟಿ ಪ್ರಕಟ