ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಲೋಕ್​ ಅದಾಲತ್ :​ ರಾಜೀ ಸಂಧಾನದ ಮೂಲಕ ವ್ಯಾಜ್ಯಗಳ ಪರಿಹಾರ ಕಂಡುಕೊಳ್ಳಬೇಕು.. ನ್ಯಾ.ಆರ್.ದೇವದಾಸ್ - etv bharat kannada

ಶಿವಮೊಗ್ಗದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ್​ ಅದಾಲತ್​ ಕಾರ್ಯಕ್ರಮವನ್ನು ಹೈಕೋರ್ಟ್​ ನ್ಯಾಯಮೂರ್ತಿಗಳು ಉದ್ಘಾಟಿಸಿದರು.

ರಾಷ್ಟ್ರೀಯ ಲೋಕ್​ ಅದಾಲತ್​
ರಾಷ್ಟ್ರೀಯ ಲೋಕ್​ ಅದಾಲತ್​

By ETV Bharat Karnataka Team

Published : Sep 9, 2023, 10:43 PM IST

ಶಿವಮೊಗ್ಗ:ರಾಜೀ ಸಂಧಾನದಿಂದ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ಸಂಬಂಧ ಮತ್ತು ಸಮಯವನ್ನು ಕಕ್ಷಿದಾರರು ಉಳಿಸಿಕೊಳ್ಳಬಹುದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್. ದೇವದಾಸ್ ಹೇಳಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಇವರುಗಳ ಸಹಯೋಗದೊಂದಿಗೆ ಇಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್​ನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಿಯವರೆಗೆ ಮನುಷ್ಯ ಇರುತ್ತಾನೋ ಅಲ್ಲಿಯವರೆಗೆ ವ್ಯಾಜ್ಯಗಳಿರುತ್ತವೆ. ಆದರೆ ಕಕ್ಷಿದಾರರು ಆದಷ್ಟು ಕೋರ್ಟಿಗೆ ಬರುವುದನ್ನು ಕಡಿಮೆ ಮಾಡಬೇಕು. ಬಹಳಷ್ಟು ವ್ಯಾಜ್ಯಗಳನ್ನು ನಮ್ಮಲ್ಲೇ ಇತ್ಯರ್ಥಪಡಿಸಿಕೊಳ್ಳಬಹುದು. ಮಧ್ಯಸ್ಥಿಕೆ ವಹಿಸುವ ಮೂಲಕ, ರಾಜೀ ಮಾಡುವ ಮೂಲಕ ಅನೇಕ ಸಮಸ್ಯೆಗಳು, ವ್ಯಾಜ್ಯಗಳನ್ನು ಇತ್ಯರ್ಥಪಡಿಸಬಹುದು. ಈ ಉದ್ದೇಶದಿಂದಲೇ ಲೋಕ್ ಅದಾಲತ್‍ನ್ನು ನಡೆಸಲಾಗುತ್ತಿದೆ. ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸಲು ಮತ್ತು ಅವರ ಸಮಯ, ಸಂಬಂಧ, ಹಣ ಉಳಿಸಲು ಲೋಕ್ ಅದಾಲತ್‍ನಲ್ಲಿ ರಾಜೀ ಸೂತ್ರದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ.

ವ್ಯಾಜ್ಯಗಳು, ಭಿನ್ನಾಭಿಪ್ರಾಯಗಳು ಕಡಿಮೆಯಾದಷ್ಟು ಸಂತೋಷವಾಗಿರ್ತಿವಿ. ಆದ್ದರಿಂದ ಕಕ್ಷಿದಾರರು ತಮ್ಮ ಭಿನ್ನಾಭಿಪ್ರಾಯವನ್ನು ಸೂಕ್ತ ರೀತಿಯಲ್ಲಿ ನಿವಾರಿಸಿಕೊಳ್ಳಲು ಮನಸ್ಸು ಮಾಡಬೇಕು. ಲೋಕ್ ಅದಾಲತ್‍ನ ಸದುಪಯೋಗ ಪಡೆಯಬೇಕು ಎಂದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ಸಾಲಿನ 3ನೇ ಲೋಕ್ ಅದಾಲತ್‍ನ್ನು ಇಂದು ನಡೆಸಲಾಗುತ್ತಿದೆ. ಜಿಲ್ಲೆಯ 12 ಪೀಠಗಳು ಇಂದು ಲೋಕ್ ಅದಾಲತ್‍ ಅನ್ನು ನಿರ್ವಹಣೆ ಮಾಡುತ್ತಿವೆ.

12 ಸಾವಿರ ನ್ಯಾಯಾಲಯದ ಪ್ರಕರಣಗಳು ಮತ್ತು 85 ಸಾವಿರ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶ ಹೊಂದಲಾಗಿದೆ. ಜುಲೈನಲ್ಲಿ ನಡೆದ ಕಳೆದ ಲೋಕ್​ ಅದಾಲತ್‍ನಲ್ಲಿ 10,691 ನ್ಯಾಯಾಲಯದ ಪ್ರಕರಣಗಳು ಮತ್ತು 78,110 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 88,801 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು ಎಂದರು. ಇದೇ ವೇಳೆ, ಸಾಂಕೇತಿಕವಾಗಿ ಪ್ರಕರಣಗಳ ರಾಜೀ ಪತ್ರವನ್ನು ವಿತರಿಸಿದರು. ಹೊಳಲೂರಿನ ವ್ಯಾಜ್ಯ ಪ್ರಕ್ರರಣದಲ್ಲಿ ರಾಜೀ ಆದ ಕುಟುಂಗಳ ಕಕ್ಷಿದಾರರಿಗೆ, ಅಪಘಾತ ಪ್ರಕರಣದಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದ ಕಕ್ಷಿದಾರರಿಗೆ ರಾಜೀಪತ್ರ ನೀಡಲಾಯಿತು. ಹಾಗೂ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ, ರಾಜೀ ಆದ ದಂಪತಿಗೆ ಹಾರ ಬದಲಾಯಿಸಿ, ಸಿಹಿ ನೀಡಿ ರಾಜೀಪತ್ರ ವಿತರಣೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್., ಜಿ.ಪಂ. ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್‍ಕುಮಾರ್, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್.ಚಂದನ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರು, ಅಭಿಯೋಜಕರು, ನ್ಯಾಯವಾದಿಗಳು, ವಿಮಾ ಕಂಪನಿಯ ಅಧಿಕಾರಿಗಳು, ಕಕ್ಷಿದಾರರು ಹಾಜರಿದ್ದರು.

ಇದನ್ನೂ ಓದಿ:ಲೋಕ ಅದಾಲತ್​: ವಿಚ್ಛೇದನಕ್ಕೆ ತಯಾರಾಗಿದ್ದ 13 ಜೋಡಿಗಳು ಒಂದಾದ ಕ್ಷಣಕ್ಕೆ ಸಾಕ್ಷಿಯಾದ ಕೌಟುಂಬಿಕ ನ್ಯಾಯಾಲಯ

ABOUT THE AUTHOR

...view details