ಶಿವಮೊಗ್ಗ: ಮಾರ್ಚ್ 20 ರಂದು ಶಿವಮೊಗ್ಗದಲ್ಲಿ ನಡೆಯುವ ಕಿಸಾನ್ ಮಂಚ್ ಪ್ರತಿಭಟನೆಯಲ್ಲಿ ರಾಕೇಶ್ ಟಿಕಾಯತ್ ಭಾಗಿಯಾಗಲಿದ್ದಾರೆ ಎಂದು ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ತಿಳಿಸಿದ್ದಾರೆ.
ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ಕಾಯ್ದೆ ವಿರೋಧಿಸಿ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಈಗಾಗಲೇ 350 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆಯದೆ ಮೊಂಡುತನ ಪ್ರದರ್ಶನ ಮಾಡುತ್ತಿದೆ. ಈಗಾಗಲೇ 11 ಸಲ ಮಾತುಕತೆ ನಡೆಸಿದರೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.
ಕೇಂದ್ರ ಸರ್ಕಾರವು ರೈತರ ಪರವಾದ ಕಾನೂನು ಅಂತ ಹೇಳುತ್ತಿದೆ. ಆದರೆ, ಅದನ್ನು ಸಂಸತ್ನಲ್ಲಿ ಮಂಡಿಸಿ ಚರ್ಚೆ ನಡೆಸಿ ಜಾರಿ ಮಾಡದೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿ ತನ್ನ ರೈತ ವಿರೋಧಿ ಧೋರಣೆಯನ್ನು ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ದೆಹಲಿಯಲ್ಲಿನ ರೈತ ಪ್ರತಿಭಟನೆಯು ಕೇವಲ ನಾಲ್ಕೈದು ರಾಜ್ಯಗಳ ಪ್ರತಿಭಟನೆ ಎಂದು ಬಿಂಬಿಸುತ್ತಿದೆ. ರೈತರ ಪ್ರತಿಭಟನೆಯನ್ನು ದಾರಿ ತಪ್ಪಿಸಲು ಯತ್ನ ಮಾಡ್ತಾ ಇದೆ. ರೈತರ ಪ್ರತಿಭಟನೆಯನ್ನು ಬೇರೆ ರೀತಿ ಬಿಂಬಿಸಲು ಹೊರಟಿದೆ. ಶಿವಮೊಗ್ಗ ಜಿಲ್ಲೆ ಭೂ ಗೇಣಿದಾರರ ವಿರುದ್ದ, ದಲಿತ ಹೋರಾಟ ಸೇರಿದಂತೆ ನದಿ ಮೂಲ ಹೋರಾಟಗಳನ್ನು ನಡೆಸಿ ಯಶಸ್ವಿ ಕಂಡ ನೆಲವಾಗಿದೆ. ಇದರಿಂದ ಮಲೆನಾಡಿನ ಈ ನೆಲದಿಂದಲೇ ಹೊಸ ಸಂದೇಶವನ್ನು ನೀಡಲು ಶಿವಮೊಗ್ಗದಲ್ಲಿ ಮಾರ್ಚ್ 20 ರಂದು ಬೃಹತ್ ಪ್ರತಿಭಟನೆ ನಡೆಸಲು ವೇದಿಕೆ ಸಿದ್ದ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘಟನೆಗಳು ಒಗ್ಗಟಾಗಿ ಹಾಜರಿದ್ದವು. ಅದೇ ರೀತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಹ ಒಗ್ಗಟ್ಟಾಗಿ ಹಾಜರಿದ್ದವು. ಈ ವೇಳೆ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ. ಶ್ರಿಕಾಂತ್ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.