ಶಿವಮೊಗ್ಗ: ಮಗು ಮಲಗಿಸಲು ತಾಯಿ ಜೋಲಿ ಕಟ್ಟಿದ್ದನ್ನೇ ತಪ್ಪಾಗಿ ತಿಳಿದ ರೈಲ್ವೆ ಇಲಾಖೆ ಕಾರ್ಮಿಕರು ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ತಾಳಗುಪ್ಪ ರೈಲು ನಿಲ್ದಾಣದಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ತಾಳಗುಪ್ಪಕ್ಕೆ ಬರುವ ರೈಲಿನಲ್ಲಿ ಹಾಲಿ ಬೆಂಗಳೂರಿನ ಯಲಹಂಕದಲ್ಲಿ ವಾಸವಿರುವ ಹೊನ್ನಾಳಿ ತಾಲೂಕಿನ ಅರಕೆರೆಯ ಎ. ಕೆ ಕಾಲೋನಿಯ ನಿವೇದಿತಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಆಗಮಿಸಿದ್ದಾರೆ.
ನಿವೇದಿತಾ ಅವರು ಶಿವಮೊಗ್ಗದ ರೈಲು ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ನಿದ್ದೆಯಲ್ಲಿದ್ದ ಕಾರಣ ಅಲ್ಲಿ ಇಳಿಯದೆ ತಾಳಗುಪ್ಪ ತಲುಪಿದ್ದಾರೆ. ರೈಲು ನಿಂತಾಗ ತಾವು ತಾಳಗುಪ್ಪಕ್ಕೆ ಬಂದಿದ್ದು ತಿಳಿದಿದೆ. ಮಕ್ಕಳು ಬೋಗಿ ಬಿಟ್ಟು ಇಳಿಯದಂತೆ ಬೋಗಿಯ ಒಳಗೆ ಲಾಕ್ ಮಾಡಿ, ನಿವೇದಿತಾ ಶೌಚಾಲಯಕ್ಕೆ ಹೋಗಿದ್ದಾರೆ. ರೈಲು ನಿಂತ ತಕ್ಷಣ ಬೋಗಿ ಸ್ವಚ್ಛಗೊಳಿಸುವ ಸಿಬ್ಬಂದಿ ಇವರ ಬೋಗಿಗೆ ಬಂದಾಗ ಮಕ್ಕಳು ಮಲಗಿದ್ದು, ವೇಲ್ ನೇತಾಡುವುದನ್ನು ಕಂಡು ಯಾರೋ ಆತ್ಮಹತ್ಯೆಗೆ ಪ್ರಯತ್ನ ಮಾಡ್ತಾ ಇದ್ದಾರೆ ಎಂಬುದನ್ನು ತಿಳಿದು ರೈಲ್ವೆ ಸಿಬ್ಬಂದಿ ಜೋರಾಗಿ ಚೀರಾಡಿದ್ದಾರೆ. ಅಷ್ಟರಲ್ಲಿ ನಿವೇದಿತಾ ಬಾಗಿಲು ತೆಗೆಯುತ್ತಿದ್ದಂತೆಯೇ ಮಕ್ಕಳನ್ನಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿಯಾ ಎಂದು ಕಪಾಳಕ್ಕೆ ಹೊಡೆದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಲ್ಲಿ ರೈಲ್ವೆ ಸಿಬ್ಬಂದಿ ನಿವೇದಿತಾಳಿಗೆ ಮಾತನಾಡಲು ಅವಕಾಶ ನೀಡದೆ ಪೊಲೀಸರಿಗೆ ಒಪ್ಪಿಸಿದ್ದಾರೆ.