ಕರ್ನಾಟಕ

karnataka

ETV Bharat / state

ರಾಗಿಗುಡ್ಡ ಸಹಜ ಸ್ಥಿತಿಯಲ್ಲಿದೆ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ: ಎಸ್ಪಿ ಎಚ್ಚರಿಕೆ

ಶಿವಮೊಗ್ಗದ ರಾಗಿಗುಡ್ಡದಲ್ಲಿ ಇತ್ತೀಚೆಗೆ ನಡೆದ ಕಲ್ಲು ತೂರಾಟ ಘಟನೆಯ ಕುರಿತು ಸುಳ್ಳು ಸುದ್ದಿ ಹರಡಬಾರದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್​ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್​ ಕುಮಾರ್
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್​ ಕುಮಾರ್

By ETV Bharat Karnataka Team

Published : Oct 3, 2023, 5:29 PM IST

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್​ ಕುಮಾರ್ ಹೇಳಿಕೆ

ಶಿವಮೊಗ್ಗ: ರಾಗಿಗುಡ್ಡ ಸಹಜ ಸ್ಥಿತಿಯಲ್ಲಿದೆ. ಕಲ್ಲು ತೂರಾಟದ ಕುರಿತು ಸುಳ್ಳು ಸುದ್ದಿ ಹರಡಬಾರದು ಎಂದು‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮನವಿ ಮಾಡಿದರು. ತಮ್ಮ ಕಚೇರಿಯಲ್ಲಿಂದು ಮಾತನಾಡಿದ ಅವರು, ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ರೀತಿ ಸುಳ್ಳು ಸುದ್ದಿ ಹರಡಿದ ಓರ್ವನ ವಿರುದ್ದ ಪೊಲೀಸ್ ಇಲಾಖೆ ಸುಮೋಟೋ ಪ್ರಕರಣ ದಾಖಲಿಸಿದೆ ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಈವರೆಗೆ 24 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಒಟ್ಟು 60 ಜನರನ್ನು ಬಂಧಿಸಲಾಗಿದೆ. ಕಲ್ಲು ತೂರಾಟದಲ್ಲಿ ಮೂರು ಸಮುದಾಯದವರ ಮನೆಗಳಿಗೂ ಹಾನಿಯಾಗಿದೆ. ಎಲ್ಲೆಡೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕರು ‌ಯಾರೂ ಕೂಡ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಜನರು ಸುಳ್ಳು ಸುದ್ಧಿಗಳನ್ನು ನಂಬಬೇಡಿ ಎಂದರು.

ಪ್ರಕರಣ ಸಂಬಂಧ ಇನ್ನೂ ಹಲವರನ್ನು ಬಂಧಿಸಲಿದ್ದೇವೆ. ಘಟನೆಗೆ ಕಾರಣರಾದ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ಕೃತ್ಯದಲ್ಲಿ ಹೊರಗಿನಿಂದ ಬಂದವರಿದ್ದಾರಾ ಎಂಬ ಅಂಶದ ಕುರಿತೂ ಸಹ ತನಿಖೆ ಮಾಡುತ್ತಿದ್ದೇವೆ. ಎಲ್ಲಾ ಆಯಾಮಗಳಲ್ಲೂ ಸಾಕ್ಷಿಗಳು ಸಿಕ್ಕಿವೆ. ಅದರಂತೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ಮಚ್ಚು, ಲಾಂಗು ತೋರಿಸಿದವರ ಬಗ್ಗೆ ತನಿಖೆ ನಡೆಯುತ್ತಿದೆ. ಬೇರೆ ರಾಜ್ಯದ, ಬೇರೆ ಜಿಲ್ಲೆಗಳ ವಿಡಿಯೋಗಳನ್ನು ರಾಗಿಗುಡ್ಡದ ಪ್ರಕರಣಕ್ಕೆ ತಳಕು ಹಾಕಿ ಹರಡಲಾಗುತ್ತಿದೆ. ಅಂಥವರ ವಿರುದ್ಧ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗುವುದು ಎಂದರು.

ರಾಗಿಗುಡ್ಡಕ್ಕೆ ಎರಡು ಮಾರುತಿ ವ್ಯಾನ್ ಬಂದಿರುವ ಬಗ್ಗೆ ಸುಳ್ಳು ಸುದ್ಧಿ ಹರಡಲಾಗುತ್ತಿದೆ. ಅವರು ನ್ಯಾಮತಿಯಿಂದ ಈದ್ ಮೆರವಣಿಗೆ ನೋಡಲು ಬಂದಿದ್ದರು. ಎಲ್ಲಾ ಮಾಹಿತಿ ಪಡೆಯಲಾಗಿದೆ. ಸುಳ್ಳು ಸುದ್ಧಿ ಹರಡಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಅನೇಕರು ಸುಳ್ಳು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೆರವಣಿಗೆಯಲ್ಲಿ ಕತ್ತಿಗಳನ್ನು ಝಳಪಿಸಿರುವುದಕ್ಕೆ ಆಕ್ಷೇಪಿಸಲಾಗಿದೆ. ಆದರೆ, ಕೆಲವು ಕಡೆ ಆಟಿಕೆ ಕತ್ತಿಗಳನ್ನು ತರಲಾಗಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದರು.

ಇದು ಒರಿಜಿನಲ್ ಕತ್ತಿ ಅಲ್ಲ ಎಂದು ತಿಳಿದು ಬಂದಿದೆ. ಆಕಸ್ಮಾತ್ ಒರಿಜಿನಲ್ ಕತ್ತಿ ಎಂದು ಕಂಡು ಬಂದರೆ, ಅಂತಹ ವಿಡಿಯೋ ಕಳುಹಿಸಿದರೆ, ನಾನು ಪರಿಶೀಲನೆ ನಡೆಸಿ ತಿಳಿಸುತ್ತೇನೆ. ಯಾವುದೇ ಸುಳ್ಳು ಸುದ್ಧಿ, ವಿಡಿಯೋಗಳನ್ನು ನಂಬಬೇಡಿ ಎಂದು ಇದೇ ವೇಳೆ ಮನವಿ ಮಾಡಿದರು.

ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ:ರಾಗಿಗುಡ್ಡದಲ್ಲಿ ಮಾತ್ರ ಕಠಿಣ 144 ಸೆಕ್ಷನ್ ಜಾರಿಯಲ್ಲಿ ಇರುತ್ತದೆ. ಉಳಿದಂತೆ ಶಿವಮೊಗ್ಗ ನಗರದಲ್ಲಿ ಸೆಕ್ಷನ್ ಇರುತ್ತದೆ. ಆದರೆ ಕಠಿಣವಾಗಿರುವುದಿಲ್ಲ. ಇಲ್ಲಿ ವ್ಯಾಪಾರ ವಹಿವಾಟಿಗೆ ಯಾವುದೇ ಸಮಸ್ಯೆ ಇಲ್ಲ. ಜನಜೀವನ ಸಹಜವಾಗಿದೆ ಎಂದು ಎಸ್ಪಿ ಹೇಳಿದರು.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಸದ್ಯ ಪರಿಸ್ಥಿತಿ ಶಾಂತ: ಎಸ್ಪಿ ಮಿಥುನ್​ ಕುಮಾರ್

ABOUT THE AUTHOR

...view details