ಕರ್ನಾಟಕ

karnataka

ETV Bharat / state

ಯಾವುದೇ ತನಿಖೆಗೆ ಒಳಪಡಿಸಿದರೂ ಅಭ್ಯಂತರವಿಲ್ಲ: ಶಾಸಕ ಆರಗ ಜ್ಞಾನೇಂದ್ರ - no objection to any investigation

ಪಿಎಸ್‌ಐ ಹಗರಣದ ತನಿಖೆಯನ್ನು ಸಿಐಡಿ ಪಾರದರ್ಶಕವಾಗಿ ಮಾಡಿದೆ. ಹಗರಣದಲ್ಲಿ ಭಾಗಿಯಾದವರಿಗೆ ಜಾಮೀನು ಸಿಗದೇ ಹೊರಬರಲು ಸಾಧ್ಯವಾಗಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

MLA Araga Gyanendra spoke to reporters.
ಶಾಸಕ ಆರಗ ಜ್ಞಾನೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.

By

Published : Jul 22, 2023, 9:56 PM IST

ಶಿವಮೊಗ್ಗ:ಪಿಎಸ್‌ಐ ಹಗರಣವನ್ನು ನ್ಯಾಯಾಂಗ ತನಿಖೆ ಅಥವಾ ಯಾವುದೇ ತನಿಖೆ ಕೈಗೊಂಡರೂ, ನಮ್ಮ ಅಭ್ಯಂತರವಿಲ್ಲ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಹಗರಣದ ತನಿಖೆಯನ್ನು ಸಿಐಡಿ ಪಾರದರ್ಶಕವಾಗಿ ಮಾಡಿದೆ. ಹಗರಣದಲ್ಲಿ ಭಾಗಿಯಾದವರು ಜಾಮೀನು ಸಿಗದೇ ಹೊರಬರಲು ಸಾಧ್ಯವಾಗಿಲ್ಲ. ಒಳ್ಳೆಯ ತನಿಖೆ ಮಾಡಿ, ಸಾಕ್ಷಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಅಷ್ಟಕ್ಕೂ ಯಾವುದೇ ತನಿಖೆಗೆ ಒಳಪಡಿಸಿದರೂ ನಮ್ಮದೆನೂ ಅಭ್ಯಂತರ ಇಲ್ಲ ಎಂದಿದ್ದಾರೆ.

ಬಂಧನಕ್ಕೊಳಗಾದ ಐವರು ಶಂಕಿತ ಉಗ್ರರು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸುವವರಿದ್ದರು. ಅವರ ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಇಲಾಖೆಯನ್ನು ಅಭಿನಂದಿಸಿದ ಅವರು, ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

ಹಾಲಿನ ದರ ಏರಿಕೆ ವಿಚಾರ: ಹಾಲಿನ ದರ ಏರಿಸಿರುವುದು ಒಳ್ಳೆಯದು. ಸರ್ಕಾರ ಹೆಚ್ಚುವರಿಯಾಗಿ ಏರಿಸಿದ ಹಣವನ್ನು ರೈತನಿಗೆ ನೀಡಬೇಕು ಹೊರತು ಹಾಲಿನ ಸಂಸ್ಥೆಗೆ ಅಲ್ಲ. ರೈತ ಹುಲ್ಲು ತಂದು ಹಾಕಲು ಹೆಣಗಾಡುತ್ತಿದ್ದಾನೆ. ಮೂರಲ್ಲ, ಐದು ರೂಪಾಯಿ ಏರಿಸಿದರೂ ಒಳ್ಳೆಯದೇ, ಆದರೇ ಹಣ ಮಾತ್ರ ರೈತನಿಗೆ ಸೇರಬೇಕು. ಸರ್ಕಾರ ಬೇಕಾದರೆ ಸಾರ್ವಜನಿಕರಿಗೆ ಗ್ರಾಹಕರಿಗೆ ಹಾಲು ಖರೀದಿಸಲು ಸಬ್ಸಿಡಿ ನೀಡಲಿ ಎಂದು ಸಲಹೆ ನೀಡಿದರು.

ಅಡಕೆ ಎಲೆ ಚುಕ್ಕೆ ವಿಚಾರ:ನಮ್ಮ ಸರ್ಕಾರ ಇದ್ದಾಗ ಕೇಂದ್ರದಿಂದ ವಿಜ್ಞಾನಿಗಳು ಬಂದು ಹೋಗಿದ್ದಾರೆ ಈ ಬಗ್ಗೆ ಸಂಶೋದನೆಗಳು ನಡೆಯುತ್ತಿದೆ. ಈಗಾಗಲೇ ಮುಖ್ಯಮಂತ್ರಿಗಳ ಬಳಿಯೂ ಅಡಕೆ ಎಲೆ ಚುಕ್ಕೆ ರೋಗದ ಬಗ್ಗೆ ಮಾತನಾಡಿದ್ದೇವೆ ಎಂದರು. ರಾಜ್ಯದಲ್ಲಿನ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಲು ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿದೆಯೇ ಹೊರತು ಪಕ್ಷಗಳು ವಿಲೀನವಾಗಿಲ್ಲ ಎಂದು ಹೇಳಿದ ಅವರು, ವಿರೋಧ ಪಕ್ಷವಾಗಿ ನಾವು ಹೇಗೆ ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ಎಲ್ಲರೂ ನೋಡುತ್ತಿದ್ದಾರೆ. ಸದ್ಯದಲ್ಲೇ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುತ್ತೇವೆ ಎಂದರು.

ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ದುಷ್ಟ ಶಕ್ತಿಗಳು ಬಿಲದ ಒಳಗೆ ಸೇರಿಕೊಂಡಿದ್ದವು. ಈಗ ಬೀದಿಗೆ ಬಂದಿವೆ. ದುಷ್ಕೃತ್ಯಗಳನ್ನು ನಡೆಸಲು ಹೊಂಚು ಹಾಕುತ್ತಿವೆ ಎಂದು ಸರ್ಕಾರದ ವೈಫಲ್ಯದ ವಿರುದ್ಧ ಗುಡುಗಿದರು.

ಪಿಎಸ್‌ಐ ಅಕ್ರಮ ನೇಮಕಾತಿ ತನಿಖೆಗೆ ಆಗ್ರಹ:ಬೆಲೆ ಏರಿಕೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ಇಂದು ಪ್ರತಿಭಟನೆ ನಡೆಸಿತು. ನಗರದ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ ಮಾಜಿ ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಮಾತನಾಡಿ, ಪಿಎಸ್‌ಐ ಅಕ್ರಮ ನೇಮಕಾತಿ ತನಿಖೆ ಮಾಡಲಿ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ. ಪಾರದರ್ಶಕ ತನಿಖೆ ನಡೆಯಲಿ. ಈ ಸರ್ಕಾರದಲ್ಲಿ ಪಿಎಸ್‌ಐ ಅಕ್ರಮದ ಫಲಾನುಭವಿಗಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹಿಂದಿನ ತಮ್ಮ ಕಾಲದ ಪಿಎಸ್‌ಐ ಅಕ್ರಮವನ್ನು ಸಹ ತನಿಖೆಗೆ ಒಳಪಡಿಸಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಹಗರಣ ನ್ಯಾಯಾಂಗ ತನಿಖೆಗೆ..ಸರ್ಕಾರದ ಆಲೋಚನೆ ಏನೆಂದು ನನಗೆ ತಿಳಿದಿಲ್ಲ: ಮಾಜಿ ಸಿಎಂ ಬೊಮ್ಮಾಯಿ

ABOUT THE AUTHOR

...view details