ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸಿ ಎಂದು ವಿಐಎಸ್ಎಲ್ ಕಾರ್ಮಿಕರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿ, ರಸ್ತೆ ತಡೆ ನಡೆಸಿದರು. ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯಿಂದ ಬಿಹೆಚ್ ರಸ್ತೆ ಅಂಡರ್ ಬ್ರಿಡ್ಜ್‌ನ ಅಂಬೇಡ್ಕರ್ ವೃತ್ತದವರೆಗೂ ಅರೆ ಬೆತ್ತಲೆ ಮೆರವಣಿಗೆ ನಡೆಸಿ, ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಪ್ರತಿಭಟನೆ ಮಾಡಿದರು.
ವಿಐಎಸ್ಎಲ್ ಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ.. -
ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚಬಾರದು, ಈ ಕಾರ್ಖಾನೆಯು ಕರ್ನಾಟಕದ ಹೆಮ್ಮೆಯಾಗಿದ್ದು ಮಲೆನಾಡಿನ ಏಕೈಕ ಸಾರ್ವಜನಿಕ ಉದ್ಯಮವಾಗಿದೆ. ಕಾರ್ಖಾನೆ ಮುಚ್ಚುವುದರಿಂದ ಕಾರ್ಮಿಕರು ಬೀದಿಪಾಲಾಗುತ್ತಾರೆ ಎಂದು ಕಾರ್ಮಿಕರು ಇಂದು ಭದ್ರಾವತಿಯಲ್ಲಿ ಪ್ರತಿಭಟನೆ ನಡೆಸಿದರು.

ಕಾರ್ಖಾನೆ ಉಳಿಯುವ ನಿಟ್ಟಿನಲ್ಲಿ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಹೋರಾಟ ಮಾಡಬೇಕು. ಆದಷ್ಟು ಬೇಗ ಮಾನ್ಯ ಸಂಸದರಾದ ರಾಘವೇಂದ್ರರವರು ಹಾಗೂ ಯಡಿಯೂರಪ್ಪನವರು ವಿಐಎಸ್ಎಲ್ ಉಳಿಸಲು ಮುಂದಾಗಬೇಕು. ವಿಐಎಸ್ಎಲ್ ವಿಚಾರವನ್ನು ಸನ್ಮಾನ್ಯ ಪ್ರಧಾನಮಂತ್ರಿಯವರಿಗೆ ತಿಳಿಸಿ ಕಾರ್ಖಾನೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಪ್ರಾಣವನ್ನಾದರೂ ಕೊಟ್ಟೇವು ವಿಐಎಸ್ಎಲ್ ಮುಚ್ಚಲು ಬಿಡುವುದಿಲ್ಲ ಎಂಬ ಘೋಷಣೆಯ ಮೂಲಕ ರಸ್ತೆ ತಡೆ ನಡೆಸಿದರು.
ಕಾರ್ಖಾನೆ ಮುಚ್ಚುವುದರಿಂದ ಆಗುವ ಅನಾಹುತಗಳನ್ನು ಭದ್ರಾವತಿಯ ಸಾರ್ವಜನಿಕರಿಗೆ ತಿಳಿಸಿದರು ಹಾಗೂ ಈ ಹೋರಾಟವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ವಿಸ್ತರಿಸಲು ಯೋಜಿಸಲಾಗಿದೆ ಎಂದರು. ಕರ್ನಾಟಕದ ಹೆಮ್ಮೆ ವಿಐಎಸ್ಎಲ್ ಮಲೆನಾಡಿನ ಏಕೈಕ ಸಾರ್ವಜನಿಕ ಉದ್ಯಮವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದರು. ಇದು ಕಾರ್ಮಿಕರನ್ನು ಬೀದಿಪಾಲು ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಹುನ್ನಾರ ಎಂದು ಕಾರ್ಮಿಕರು ಕಿಡಿಕಾರಿದರು.