ಶಿವಮೊಗ್ಗ: ಎಂಪಿಎಂಗೆ ಲೀಸ್ ನೀಡಿದ್ದ 33 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಸರ್ಕಾರ ಈ ಕೂಡಲೇ ವಾಪಸ್ ಪಡೆದು ಅರಣ್ಯ ಇಲಾಖೆಗೆ ನೀಡುವಂತೆ ಆಗ್ರಹಿಸಿ 'ನಮ್ಮೂರಿಗೆ ಅಕೇಶಿಯ ಮರ ಬೇಡ' ಹೋರಾಟ ಒಕ್ಕೂಟ ವತಿಯಿಂದ ನಗರದ ಬೆಕ್ಕಿನ ಕಲ್ಮಠದಿಂದ ಸಿಸಿಎಫ್ ಕಚೇರಿವರೆಗೂ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ಪಶ್ಚಿಮ ಘಟ್ಟದಲ್ಲಿ ದಟ್ಟವಾಗಿ ಹಬ್ಬಿಕೊಂಡಿರುವ ಸುಮಾರು 33 ಸಾವಿರ ಹೆಕ್ಟೇರ್ ಭೂಮಿಯನ್ನು 40 ವರ್ಷಗಳ ಅವಧಿಗೆ ಲೀಸ್ಗೆ ನೀಡಲಾಗಿತ್ತು. ಆದರೆ ಈಗ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡಿದೆ. ಜೊತೆಗೆ ಲೀಸ್ ಅವಧಿ ಕೂಡ ಮುಗಿದಿದೆ. ಹಾಗಾಗಿ ಸರ್ಕಾರ 33 ಸಾವಿರ ಹೆಕ್ಟೇರ್ ಭೂಮಿಯನ್ನು ಕಬಳಿಸಲು ಪ್ರಯತ್ತಿಸುತ್ತಿದೆ ಎಂದು ಆರೋಪಿಸಿದರು. ಹಾಗೂ ಕಾಗದ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಿ, ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಲೀಸ್ಗೆ ನೀಡುವ ಮೂಲಕ ಅಕೇಶಿಯ ಮರಗಳನ್ನು ಬೆಳೆಸಲು ಮುಂದಾಗಿದೆ.