ಶಿವಮೊಗ್ಗ: ರಜಪೂತರ ವಿರುದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಶಿವಮೊಗ್ಗದಲ್ಲಿ ಜಿಲ್ಲಾ ರಜಪೂತ ಸಮಾಜ ಪ್ರತಿಭಟನೆ ನಡೆಸಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ರಜಪೂತ ಸಮಾಜದವರು ಸಿ ಟಿ ರವಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಸಿ ಟಿ ರವಿ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ದೇಶದ ಇತಿಹಾಸವನ್ನು ಕೆಣಕಿ ರಜಪೂತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬ್ರಿಟಿಷರ ವಿರುದ್ಧ ಸ್ವತಂತ್ರ ಹೋರಾಟ ಮಾಡುವಾಗ ರಜಪೂತರು 'ಇದು ತಮ್ಮ ಕೆಲಸ ಅಲ್ಲ' ಎಂದು ಸುಮ್ಮನೆ ಕುಳಿತಿದ್ದರು. ಶಿವಾಜಿ ಮೊಘಲರ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುವಾಗ ಇದೇ ರಜಪೂತರು ಮೊಘಲರ ಜೊತೆ ಇದ್ದರು ಎಂದು ಹೇಳಿ ರಜಪೂತ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಸಿ ಟಿ ರವಿಯವರು ಚರಿತ್ರೆ ಹಾಗೂ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡದೇ, ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳದೇ ಕೇವಲ ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಮಾತಾಡಿ ಸಮಾಜದ ಗೌರವವಕ್ಕೆ ಧಕ್ಕೆ ತಂದಿರುತ್ತಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಿ.ಟಿ. ರವಿ ಅವರ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.