ಶಿವಮೊಗ್ಗ :ರಾಜ್ಯ ಕಾಂಗ್ರೆಸ್ ಸೋಶಿಯಲ್ ಘಟಕದ ಉಪಾಧ್ಯಕ್ಷೆ ಸೌಗಂಧಿಕಾ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಅವಹೇಳನಕಾರಿ ಕಾಮೆಂಟ್ ವಿರೋಧಿಸಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ನಗರದ ಬಿ ಹೆಚ್ ರಸ್ತೆಯಲ್ಲಿರುವ ಕರ್ನಾಟಕ ಸಂಘದ ಮುಂಭಾಗ ಪೊರಕೆ ಹಿಡಿದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಸೂಲಿಬೆಲೆ ಮಾತನಾಡಿದ್ದಾರೆಂದು ಆರೋಪಿಸಿದ್ದಾರೆ. ಈಗಾಗಲೇ ಈ ಬಗ್ಗೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್ ಸುಂದರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಸೂಲಿಬೆಲೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ ಕೂಡ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ, ಮೋದಿ, ಮೋದಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರು, ಮುಖಂಡರು ಪರಸ್ಪರ ಘೋಷಣೆ ಕೂಗಿದ್ದಾರೆ.
ಅವಹೇಳನಕಾರಿಯಾಗಿ ಪ್ರತಿಕ್ರಿಯೆ:ಇದೇ ತಿಂಗಳ 23 ರಂದು ಚಂದ್ರಯಾನ -3 ಯಶಸ್ವಿಗೆ ಪೂಜೆ ಮಾಡಿಸಿ ಫೋಟೋ ಹಾಕಿ ಎಂದು ಪೋಸ್ಟ್ ಹಾಕಿದ್ದ ಸೂಲಿಬೆಲೆ ಪೋಸ್ಟ್ಗೆ ಸೌಗಂಧಿಕ ರಘುನಾಥ್ ತಮ್ಮ ಅಧಿಕೃತ ಖಾತೆಯಿಂದ ಕಾಮೆಂಟ್ ಮಾಡಿ, ದೇವಸ್ಥಾನಕ್ಕೆ ಪೂಜೆ ಮಾಡೋದು ತಪ್ಪಲ್ಲ. ಆದರೆ ಫೊಟೋ ಹಾಕಿ ಅಂತ ಹೇಳಿರೋದು ತಪ್ಪು. ವಿಜ್ಞಾನಿಗಳ ಪರಿಶ್ರಮ ಫಲಿಸಲಿ ಎಂದು ಬೇಡಿಕೊಂಡರೆ ಸಾಕು ಎಂದು ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್ಗೆ ಸೂಲಿಬೆಲೆಯವರು ಅವಹೇಳನಕಾರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ದೂರು ನೀಡಿದ್ದರು.
ಈ ಕುರಿತು ಮಾತನಾಡಿರುವ ಸೌಗಂಧಿಕಾ ರಘುನಾಥ್ ದೇಶ, ಭಾಷೆ, ಧರ್ಮದ ಹೆಸರಲ್ಲಿ ಧರ್ಮದ ಹೆಸರಲ್ಲಿ ಬಾಷಣ ಮಾಡುವ ವ್ಯಕ್ತಿ ಈಗ ಹೆಣ್ಣುಮಕ್ಕಳ ನಿಂದನೆಗೆ ಇಳಿದಿದ್ದಾರೆ. ಯಾವ ಹೆಣ್ಣಿಗೂ ಕೂಡ ಈತರದ ಮಾತುಗಳನ್ನ ಆಡಬಾರದು. ಅವರ ಮನೆಯಲ್ಲಿರುವ ತಾಯಿ ಕೂಡ ಹೆಣ್ಣು ಎನ್ನುವುದನ್ನು ಮರೆಯಬಾರದು. ಹಾಗಾಗಿ ಅಂತವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು.
ಸೌಗಂಧಿಕ ರಘುನಾಥ್ ಹೇಳಿದ್ದೇನು? : ದೇವರಿಗೆ ಪೂಜೆ ಮಾಡುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ ಸೂಲಿಬೆಲೆ ಅವರು ತೋರ್ಪಡಿಕೆಯ ಫೊಟೋ ಹಾಕಿ ಎಂದಿದ್ದಕ್ಕೆ, ನಾನು ಸಭ್ಯವಾಗಿ ಕಾಮೆಂಟ್ ಮಾಡಿದ್ದೆ. ಈ ಕಾಮೆಂಟ್ ಹಾಕಿದ ಬಳಿಕ ಸಾಕಷ್ಟು ಫೇಕ್ ಅಕೌಂಟ್‌ಗಳಿಂದ ನನ್ನ ತೇಜೋವಧೆ ನಡೆದಿದೆ. ನಾನು ಯಾವುದಕ್ಕೂ ಸೊಪ್ಪು ಹಾಕೋದಿಲ್ಲ. ಸ್ವತಃ ಸೂಲಿಬೆಲೆ ಅವರು ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಾರೆ. ಹೆಣ್ಣು ನಿಂದನೆಯ ಅಸಭ್ಯ ಕಾಮೆಂಟ್ಗೆ ನಾನೂ ಪ್ರತಿಕ್ರಿಯಿಸಿ, ಸೂಲಿಬೆಲೆ ದೊಡ್ಡ ಭಾಷಣಕಾರನಾಗಿ, ಮಾತೃ ಪ್ರೀತಿಯಿಂದಲೂ ಬೆಳೆದು ಈ ರೀತಿ ಕಾಮೆಂಟ್ ಹಾಕಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದೆ.
ಸುಳ್ಳು ಭಾಷಣ ಮಾಡಿ, ಜನರನ್ನು ಧರ್ಮದ ಹೆಸರಲ್ಲಿ ದಿಕ್ಕು ತಪ್ಪಿಸುವುದನ್ನು ಬಿಡಬೇಕು. ಹೆಣ್ಣುಮಕ್ಕಳಿಗೆ ಮರ್ಯಾದೆ ಕೊಡಬೇಕು. ಅವರು ಆ ಕಾಮೆಂಟ್ ಡಿಲೀಟ್ ಮಾಡಿದ ಮೇಲೆ ಫೇಕ್ ಅಕೌಂಟ್ ಮೂಲಕ ಸ್ಕ್ರೀನ್ ಶಾಟ್ ಬಳಸಿ ತೇಜೋವಧೆ ಮಾಡಿಸಿದ್ದಾರೆ. ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುವ ದೊಡ್ಡಗುಣ ಸೂಲಿಬೆಲೆಗೆ ಇಲ್ಲ. ಇಂತಹ ಸ್ತ್ರೀ ನಿಂದಕ ಸೂಲಿಬೆಲೆಯ ಮಾತುಗಳನ್ನು ಜನ ನಂಬುವುದು ನಾಚಿಕೆಗೇಡಿನ ವಿಷಯ ಎಂದು ದೂರು ನೀಡಿದ ಬಳಿಕ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ:ಶಿವಮೊಗ್ಗ: ಕಾಂಗ್ರೆಸ್ ಕಾರ್ಯಕರ್ತೆಯ ಅವಹೇಳನ ಆರೋಪ; ಸೂಲಿಬೆಲೆ ವಿರುದ್ಧ ಎಫ್ಐಆರ್