ಶಿವಮೊಗ್ಗ: ತುಂಗೆಯಿಂದ ಭದ್ರೆಗೆ 15 TMC ನೀರನ್ನು ತೆಗೆದುಕೊಂಡು ಹೋಗುವ ಯೋಜನೆ ಮುಂದಿನ ಒಂದು ವರ್ಷದೊಳಗೆ ಪೂರ್ಣವಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಮುತ್ತಿನಕೊಪ್ಪ ಗ್ರಾಮದ ಬಳಿಯ ಕಾಮಗಾರಿ ವೀಕ್ಷಿಸಿ, ಭದ್ರಾವತಿಯ ಬಿ ಆರ್ ಪ್ರಾಜೆಕ್ಟ್ ಯ ಮುಖ್ಯ ಇಂಜಿನಿಯರ್ ಅವರ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಭದ್ರಾ ಮೆಲ್ದಂಡೆ ಯೋಜನೆಯ ಭಾಗವಾಗಿ ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯ ಅಂಗವಾಗಿ ಶಿವಮೊಗ್ಗ ಜಿಲ್ಲೆ ಮುತ್ತಿನಕೊಪ್ಪ ಬಳಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರು ಹಾಯಿಸುವ ಯೋಜನೆಯು ನೆನೆಗುದಿಗೆ ಬಿದ್ದಿದೆ. ಇದರಿಂದ ನೆನೆಗುದಿಗೆ ಬಿದ್ದ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಿಕೊಂಡರು.
ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ತುಂಗಾ ನದಿಯಿಂದ ಭದ್ರಾ ನದಿಗೆ ನೀರು ಹಾಯಿಸುವ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಬೇಕಿದೆ. ವರ್ಷದಲ್ಲಿ ಕಾಮಗಾರಿ ಮುಗಿಸುವ ಭರವಸೆ ಅಧಿಕಾರಿಗಳು ನೀಡಿದ್ದಾರೆ ಎಂದರು.
ನೀರು ಹಾಯಿಸುವ ಯೋಜನೆಗೆ ಎರಡು ಕಡೆ ನೀರನ್ನು ಲೀಪ್ಟ್ ಮಾಡಬೇಕಿದೆ. ಇದಕ್ಕಾಗಿ ವಿದ್ಯುತ್ ನ ಅವಶ್ಯಕತೆ ಇದೆ. ಇದಕ್ಕಾಗಿ ಇನ್ನೂ 12 ಟವರ್ ನಿರ್ಮಾಣ ಬಾಕಿಯಿದೆ. ಈ ಯೋಜನೆಯು 2018 ರಿಂದ ಆಮೆಗತಿಯಲ್ಲಿ ನಡೆಯುತ್ತಿದೆ. 2018ರಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಣ ಬಿಡುಗಡೆ ಮಾಡಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರದಿಂದ ನಿರ್ಲಕ್ಷಿಸಿತ್ತು. ಈಗ ನಮ್ಮ ಸರ್ಕಾರ ಬಂದಿದೆ. ಕಾಮಗಾರಿಯನ್ನು ಚುರುಕುಗೊಳಿಸುತ್ತೇವೆ ಎಂದರು.