ಶಿವಮೊಗ್ಗ:ಸೆ. 21 ರಿಂದ 28 ರವರೆಗೆ ಜಿಲ್ಲೆಯ 17 ಕೇಂದ್ರಗಳಲ್ಲಿ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ನಡೆಯುತ್ತಿದ್ದು, ಈ ವೇಳೆ ಪರೀಕ್ಷಾ ಕೇಂದ್ರಗಳ ಸುತ್ತ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಡಿಸಿ ಆದೇಶಿಸಿದ್ದಾರೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸೂಚನೆಯಂತೆ ಸೆ.21 ಎಸ್ಎಸ್ಎಲ್ ಸಿ ಪೂಕರ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆಗಳು ನಡೆಯುವ ದಿನಗಳಲ್ಲಿ ಬೆಳಿಗ್ಗೆ 8.00 ರಿಂದ ಸಂಜೆ 4.00ರವರೆಗೆ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ.
ಅಲ್ಲದೇ ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಟೈಪಿಂಗ್, ಝೆರಾಕ್ಸ್ ಅಂಗಡಿಗಳು ರಾತ್ರಿ 10.00 ಗಂಟೆಗಳ ನಂತರ ತೆರೆಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳೊಳಗೆ ಪ್ರವೇಶಿಸುವುದು, ನಿರ್ಬಂಧಿತ ಪ್ರದೇಶದ ಸುತ್ತಮುತ್ತಲಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚಿನ ಜನರು ಸೇರುವುದು, ಅಲ್ಲದೇ ಮೊಬೈಲ್ ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿವಕುಮಾರ್ ಆದೇಶ ನೀಡಿದ್ದಾರೆ.
ಯಾರಾದರೂ ಪರೀಕ್ಷಾ ಕೇಂದ್ರಗಳ 200 ಮೀ ವ್ಯಾಪ್ತಿಯೊಳಗೆ ಪ್ರವೇಶಿಸಿದರೆ/ಪ್ರವೇಶಿಸಲು ಯತ್ನಿಸಿದರೆ ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಪೊಲೀಸರ ವಶಕ್ಕೆ ಒಪ್ಪಿಸಿ ಕೂಡಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸೂಚಿಸಲಾಗಿದೆ.