ಶಿವಮೊಗ್ಗ :ಸಾಹಿತಿ ಪ್ರೊ. ಭಗವಾನ್ ಅವರಿಗೆ ಸಾಗರದ ಜೆಎಂಎಫ್ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಭಗವಾನ್ ರಚಿಸಿದ ರಾಮ ಮಂದಿರ ಏಕೆ ಬೇಡ? ಎಂಬ ಕೃತಿಯು ಭಾರತೀಯ ಹಿಂದೂ ಧಾರ್ಮಿಕ ಭಾವನೆ ಧಕ್ಕೆ ತರುವಂತಿದೆ. ಈ ಕೃತಿಯನ್ನು ನಿಷೇಧಿಸಿ ಎಂದು ಸಾಗರ ತಾಲೂಕು ಇಕ್ಕೇರಿಯ ಮಹಾಬಲೇಶ್ವರ ಎಂಬುವರು ಸಾಗರ ಜೆಎಂಎಫ್ಸಿ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಈ ದೂರಿಗೆ ಸಂಬಂಧಿಸಿದ ವಿಚಾರಣೆ ಸಂದರ್ಭದಲ್ಲಿ ಭಗವಾನ್ ಕೋರ್ಟ್ ಗೆ ಗೈರು ಹಾಜರಾಗಿದ್ದರು. ಕೋರ್ಟ್ ಖುದ್ದು ಹಾಜರಾಗುವಂತೆ ನೋಟಿಸ್ ನೀಡಿದ್ದರು ಸಹ ಹಾಜರಾಗದೆ ಇರುವುದರಿಂದ ಕೋರ್ಟ್ ಸಾಗರ ಟೌನ್ ಪೊಲೀಸರ ಮೂಲಕ ಮೈಸೂರು ಎಸ್ಪಿ ಅವರಿಗೂ ನೋಟಿಸ್ ಜಾರಿ ಮಾಡಿ ಕೋರ್ಟ್ ಗೆ ಭಗವಾನ್ ಅವರನ್ನು ಹಾಜರುಪಡಿಸುವಂತೆ ಸೂಚಿಸಿತ್ತು.