ಶಿವಮೊಗ್ಗ:ಮಲೆನಾಡು ಭಾಗದಲ್ಲಿ ಹಸೆ ಚಿತ್ತಾರ ಒಂದು ವಿಶಿಷ್ಟವಾದ ಕಲೆ. ಇಲ್ಲಿನ ದೀವರು ಸಮುದಾಯವು ತಲೆತಲಾಂತರಗಳಿಂದ ಹಸೆ ಚಿತ್ತಾರ, ಬೂಮಣ್ಣಿ ಬುಟ್ಟಿ ಚಿತ್ತಾರಗ ಕಲೆಯನ್ನು ಬೆಳೆಸಿಕೊಂಡು ಬಂದಿದೆ. ಇಂದಿಗೂ ಬುಡಕಟ್ಟು ಸಂಸ್ಕೃತಿಯ ಲಕ್ಷಣಗಳನ್ನು ಹೊಂದಿರುವ, ವಿಶೇಷವಾಗಿ ಮಹಿಳೆಯರೇ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಬಂದಿರುವ ಈ ಚಿತ್ತಾರದ ಪರಂಪರೆಯನ್ನು ನಾಡಿಗೆ ಪರಿಚಯಿಸಿ, ಉಳಿಸುವ ಸಲುವಾಗಿ ಶಿವಮೊಗ್ಗದ ಧೀರ ದೀವರ ಬಳಗ ಆನ್ಲೈನ್ ಕಾರ್ಯಕ್ರಮ ಆಯೋಜಿಸಿತ್ತು.
ಮಲೆನಾಡಿನಲ್ಲಿ ದೀವರ ಸಮುದಾಯದಲ್ಲಿ ಭೂಮಿ ಹುಣ್ಣಿಮೆ, ವಿವಾಹ ಮಹೋತ್ಸವಗಳು ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಹಸೆ ಚಿತ್ತಾರದ ಮೆರುಗು ಹೆಚ್ಚಾಗಿರುತ್ತದೆ. ಆದರೆ ಆಧುನೀಕತೆ ಭರಾಟೆ ಮಧ್ಯೆ ಹಸೆ ಕಲೆಯ ಹೊಳಪು ಇತ್ತೀಚಿಗೆ ಕಡಿಮೆಯಾಗುತ್ತಿದ್ದು, ಅದನ್ನು ಉಳಿಸಿ, ನಾಡಿಗೆ ಪರಿಚಯಿಸಲು ಶಿವಮೊಗ್ಗದ ಧೀರ ದೀವರ ವಾಟ್ಸ್ಆ್ಯ್ಪ್ ಗ್ರೂಪ್ ಬಳಗ ಮುಂದಾಗಿದೆ. ಈ ಕಾರಣಕ್ಕಾಗಿ ಭೂಮಿ ಹುಣ್ಣಿಮೆ ವೇಳೆ ಧೀರ ದೀವರ ಬಳಗವು, ಮಲೆನಾಡು ದೀವರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಮಿತಿ ಮತ್ತು ರಾಮ ಮನೋಹರ ಲೂಹಿಯಾ ಟ್ರಸ್ಟ್ ಸಹಯೋಗದಲ್ಲಿ ರಾಜ್ಯಮಟ್ಟದ ಭೂಮಣ್ಣಿ ಬುಟ್ಟಿ ಆನ್ಲೈನ್ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಗೆ ರಾಜ್ಯದ ವಿವಿಧ ಭಾಗಗಳ 170 ಕ್ಕೂ ಹೆಚ್ಚು ಚಿತ್ತಾರ ಕಲಾವಿದರು ಬುಟ್ಟಿಗಳನ್ನು ಕಳುಹಿಸಿದ್ದರು. ಇದೀಗ ಅದರಲ್ಲಿ ಅತ್ಯುತ್ತಮ ಚಿತ್ತಾರದ ಬುಟ್ಟಿಯನ್ನು ಆಯ್ಕೆ ಮಾಡಿ, ಚಿತ್ತಾರಗಿತ್ತಿ ಪ್ರಶಸ್ತಿ ಹಾಗೂ ಗೌರವಧನ ನೀಡಿ ಗೌರವಿಸಲಾಗಿದೆ.
ಶಿವಮೊಗ್ಗದ ಆರ್ಯ ಈಡಿಗರ ಭವನದಲ್ಲಿ ಆಯೋಜಿಸಿದ್ದ ಚಿತ್ತಾರಗಿತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉತ್ತಮ ಚಿತ್ತಾರಗಿತ್ತಿಯ ಜೊತೆಗೆ 20 ಕ್ಕೂ ಹೆಚ್ಚು ಚಿತ್ತಾರ ಕಲಾವಿದರಿಗೆ ಹಾಗೂ ಮೂವರು ಹಿರಿಯ ಕಲಾವಿದರನ್ನು ಬಳಗದಿಂದ ಸನ್ಮಾನಿಸಿ, ಗೌರವಿಸಲಾಯಿತು. ಸಮಾರಂಭದಲ್ಲಿ ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ, ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಜಿ.ಡಿ.ನಾರಾಯಣಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಪ್ರಮುಖ ಆಕರ್ಷಣೆಯಂತೆ ಕಾರ್ಯಕ್ರಮದಲ್ಲಿ ಆಯ್ದ ಬುಟ್ಟಿಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸನ್ಮಾನ ಸ್ವೀಕರಿಸಿದ ಹಸೆ ಕಲಾವಿದೆಯರು, ರಂಗು ರಂಗಿನ ದುನಿಯಾದಲ್ಲಿ ಮೂಲೆಗುಂಪಾಗುತ್ತಿರುವ ಈ ವಿಶಿಷ್ಟ ಹಸೆ ಕಲೆಯನ್ನು ಜೀವಂತವಾಗಿರಿಸುವ ಸದುದ್ದೇಶದಿಂದ ಧೀರ ದೀವರ ವಾಟ್ಸ್ಆ್ಯಪ್ ಬಳಗ ನಡೆಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಇದನ್ನೂ ಓದಿ:ಪ್ರಧಾನಿಯಿಂದ ಅನುಭವ ಮಂಟಪ ಲೋಕಾರ್ಪಣೆಗೆ ನಿರ್ಧಾರ : ಸಚಿವ ಪ್ರಭು ಚೌಹಾಣ್