ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು. ಶಿವಮೊಗ್ಗ:''ಕಾಂಗ್ರೆಸ್ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸಲು ನರೇಂದ್ರ ಮೋದಿ ಸರ್ಕಾರ ಇಲ್ಲ'' ಎಂದು ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನೀವು ಅಕ್ಕಿ ಕೊಡುತ್ತೇವೆ ಎಂದಾಗ ನಿಮಗೆ ಮೋದಿ ಸರ್ಕಾರ ಅಕ್ಕಿ ಕೊಡುತ್ತೇವೆ ಎಂದು ಹೇಳಿರಲಿಲ್ಲ. ಈಗ ನೀವು ಅಕ್ಕಿಗಾಗಿ ಕೇಂದ್ರದ ಕಡೆ ಬೊಟ್ಟು ಮಾಡುವುದು ಸರಿಯಲ್ಲ'' ಎಂದರು.
ಇದನ್ನೂ ಓದಿ:ಬಿಜೆಪಿಯ ಸುಳ್ಳಿನ ಫ್ಯಾಕ್ಟರಿ ಬಂದ್ ಮಾಡುತ್ತೇವೆ: ಸಚಿವ ಪ್ರಿಯಾಂಕ್ ಖರ್ಗೆ
''ರಾಜ್ಯ ಸರ್ಕಾರ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ವಿರುದ್ದ ಮಾತನಾಡುತ್ತಿರುವುದು ಸರಿಯಲ್ಲ. ನೀವು ನಿಮ್ಮ ಭರವಸೆ ನೀಡಿದಂತೆ ಜನತೆಗೆ ಅಕ್ಕಿ ನೀಡಿ, ಅದನ್ನು ಬಿಟ್ಟು ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಆರೋಪ ಮಾಡುವುದು, ರಸ್ತೆಗಿಳಿದು ಪ್ರತಿಭಟನೆ ಮಾಡುವುದು ಸರಿ ಅಲ್ಲ. ಇದು ರಾಜ್ಯದ ಜನರನ್ನ ತಪ್ಪು ದಾರಿಗೆ ಕರೆದುಕೊಂಡು ಹೋಗುತ್ತದೆ. ನಾವು ಪ್ರಾಮಾಣಿಕವಾಗಿ ಮಾತನಾಡುತ್ತೇವೆ. ನಮಗೆ ವಿರೋಧ ಪಕ್ಷದಲ್ಲಿದ್ದು ಅನುಭವ ಚೆನ್ನಾಗಿದೆ. ಹಾದಿಯಲ್ಲಿ ಬೀದಿಯಲ್ಲಿ ಸಚಿವರು ಮಾತನಾಡಿಕೊಂಡು ಹೋಗುವುದು ಕೇಂದ್ರ ಸರ್ಕಾರದ ಮೇಲೆ ಬಟ್ಟು ತೋರಿಸುವುದು ಒಳ್ಳೆಯದಲ್ಲ'' ಎಂದು ಹೇಳಿದರು.
''ಡಿ.ಕೆ. ಶಿವಕುಮಾರ್ ಅವರು ಪಾಪ ಅವರ ನೋವನ್ನು ಕೂಡ ಅರ್ಥಮಾಡಿಕೊಳ್ಳಬೇಕು. ಡಿ.ಕೆ. ಶಿವಕುಮಾರ್ ಅವರು ಕಳೆದ ಎರಡು ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವರಲ್ಲಿ ಶ್ರಮಪಟ್ಟಿದ್ದಾರೆ. ರಾಜ್ಯದಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಆಗಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ, ಆ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಬಂದು ಕೂತಿದ್ದಾರೆ ಎಂಬುದು ಅವರಿಗೆ ತೀವ್ರ ನೋವಿದೆ. ಹಾಗೆ ಯಾವ ಶಾಸಕರು ಕೂಡ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ನೋವಿದೆ. ಇದು ಸಹಜವಾಗಿ ಡಿ.ಕೆ. ಸುರೇಶ್ ಅವರಿಗೂ ನೋವು ಉಂಟು ಮಾಡಿರಬಹುದು'' ಎಂದು ಹೇಳಿದರು.
ವಿದ್ಯುತ್ ದರ ಏರಿಕೆಗೆ ಆಕ್ಷೇಪ:''ರಾಜ್ಯದಲ್ಲಿರುವಂತಹ ಕೈಗಾರಿಕೆಗಳು ಮತ್ತು ಉದ್ಯಮಗಳು ನಷ್ಟಕ್ಕೆ ಒಳಗಾಗುತ್ತಿವೆ. ಕೋವಿಡ್ನಿಂದ ಈ ಹಿಂದೆ ಹೊಡೆತ ತಿಂದಂತಹ ಉದ್ಯಮಗಳು ಈಗ ಮತ್ತೆ ಚೇತರಿಸಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ವಿದ್ಯುತ್ ದರವನ್ನು ಹೆಚ್ಚಳ ಮಾಡಿರುವುದು ರಾಜ್ಯ ಸರ್ಕಾರ ಉದ್ಯಮಗಳ ಮೇಲೆ ಗಧಾ ಪ್ರಹಾರ ಮಾಡಿದಂತೆ ಆಗಿದೆ. ಮುಂಬರುವ 22ರಂದು ಇಡೀ ರಾಜ್ಯಾದ್ಯಾಂತ ಕೈಗಾರಿಕೋದ್ಯಮಿಗಳು ಕೂಡ ಬೀದಿಗೆ ಇಳಿಬಿಳಿದು ಹೋರಾಟ ನಡೆಸಲಿದ್ದಾರೆ'' ಎಂದು ತಿಳಿಸಿದರು.
ಇದನ್ನೂ ಓದಿ:ವಿದ್ಯುತ್ ದರ ಹೆಚ್ಚಳ ವಿರುದ್ಧದ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ: ಕಟೀಲ್
ಭರವಸೆ ಈಡೇರಿಸುವಂತೆ ಬಿ.ವೈ ರಾಘವೇಂದ್ರ ಆಗ್ರಹ: ''ರಾಜ್ಯ ಸರ್ಕಾರ ಮೊಸಳೆ ಕಣ್ಣೀರು ಸುರಿಸದೇ ಚುನಾವಣೆ ಪೂರ್ವ ಕೊಟ್ಟ ಭರವಸೆ ಈಡೇರಿಸಬೇಕು'' ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದ್ದಾರೆ. ಶಿವಮೊಗ್ಗದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ದಿಶಾ ಸಭೆ ನಡೆಸಿ ಮಾತನಾಡಿದರು. ''ರಾಜ್ಯ ಸರ್ಕಾರ ಗ್ಯಾರಂಟಿ ಕಾರ್ಡ್ ಘೋಷಣೆ ಮಾಡಿದೆ. ಅದಕ್ಕೆ ಪೂರಕವಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಈ ಸಿದ್ದತೆಗಳೆ ಜನರಿಗೆ ಹಿಂಸೆ ಆಗುತ್ತಿದೆ'' ಎಂದ ಅವರು, ''ಒಂದೇ ಕೆಲಸಕ್ಕೆ ಎರಡ್ಮೂರು ಬಾರಿ ಹೋಗೋದು, ಬರೋದು ಆಗಬಾರದು. ದಿನಪೂರ್ತಿ ಸೇವಾ ಕೇಂದ್ರದ ಬಳಿಯೇ ಕುಳಿತುಕೊಳ್ಳುವ ಪರಿಸ್ಥಿತಿಯಿದೆ. ಇದು ಅದಷ್ಟು ಬೇಗ ಸರಳೀಕರಣ ಮಾಡಿ ಜನರಿಗೆ ಸೇವೆ ಮುಟ್ಟಬೇಕು'' ಎಂದರು.
''ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊಡುತ್ತಿರುವುದು 5 ಕೆಜಿ ಅಕ್ಕಿ. ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡುತ್ತೇನೆಂದು ಘೋಷಣೆ ಮಾಡಿತ್ತು. ಈಗ ಸರ್ಕಾರ ಬಂದು ಎರಡು ತಿಂಗಳಾಗುತ್ತಾ ಬಂತು. ಸರ್ಕಾರ ಬಂದ ಮಾರನೇ ದಿನದಿಂದ ಗ್ಯಾರಂಟಿ ಕೊಡುತ್ತೇವೆಂದು ಹೇಳಿದ್ದರು. ರಾಜ್ಯ ಸರ್ಕಾರ ಅದಷ್ಟು ಬೇಗ ಅಕ್ಕಿ ವಿತರಣೆ ಮಾಡಬೇಕು'' ಒತ್ತಾಯಿಸಿದರು.
''ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕೇಂದ್ರ ದತ್ತ ಬೊಟ್ಟು ಮಾಡ್ತಿದ್ದಾರೆ. ರಾಜ್ಯದಲ್ಲಿ ಅಕ್ಕಿ ಸಿಗುತ್ತಿಲ್ಲ. ಈಗಿರುವ ಅಕ್ಕಿ ಬೆಲೆ ಹೆಚ್ಚಿದೆ ಅಂತ ಸಿಎಂ ಹೇಳುತ್ತಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳದೇ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಕೆಜಿ ಜತೆ 10 ಕೆಜಿ ಅಕ್ಕಿ ಕೊಡಬೇಕು'' ಎಂದು ಆಗ್ರಹಿಸಿದರು. ಪ್ರತಿ ಮನೆಯ, ಪ್ರತಿ ವ್ಯಕ್ತಿಗೆ ಮುಟ್ಟಿಸುವ ಕೆಲಸ ಆಗಬೇಕು. ಅಕ್ಕಿ ಕೊಡಲು ರಾಜ್ಯದಲ್ಲಿ ಅಕ್ಕಿ ಕೊರತೆಯಿಲ್ಲ. ಭತ್ತ ಬೆಳೆಯುವ ರೈತರು ರಾಜ್ಯದಲ್ಲಿ ಇದ್ದಾರೆ. ರಾಜ್ಯದಲ್ಲೇ ಅಕ್ಕಿ ಸಂಗ್ರಹಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ''ರಾಜ್ಯದ ಸೋನಾ ಮಸೂರಿ ಅಕ್ಕಿ ದರ 55 ರೂ. ಇದೆ ಅಂತಾರೆ. ಯಾಕೆ, ಬಡವರು ಆ ಅನ್ನ ತಿನ್ನಬಾರದಾ?'' ಎಂದು ಪ್ರಶ್ನಿಸಿದರು.
''ಮಹಿಳೆಯರಿಗೆ ಬಸ್ನಲ್ಲಿ ಉಚಿತವಾಗಿ ಓಡಾಡಲು ಅವಕಾಶ ಮಾಡಿದ್ದಾರೆ. ಆದರೆ, ತೀರ್ಥಹಳ್ಳಿ ಭಾಗದಲ್ಲಿ ಸರ್ಕಾರಿ ಬಸ್ ಇಲ್ಲ. ಖಾಸಗಿ ಬಸ್ ಜೊತೆ ಒಪ್ಪಂದ ಮಾಡಿಕೊಂಡು ಆ ಭಾಗದಲ್ಲಿ ಬಸ್ ಓಡಿಸುವ ಕ್ರಮಕೈಗೊಳ್ಳಲಿ'' ಎಂದರು. ವಿದ್ಯಾರ್ಥಿಗಳಿಗೆ ಕೂಡ ಸಮಸ್ಯೆ ಆಗುತ್ತಿದೆ. ಸರ್ಕಾರ ಬಸ್ ಸಂಖ್ಯೆ ಹೆಚ್ಚಿಸಿ ಸಮಸ್ಯೆ ನಿವಾರಿಸಬೇಕು. ಎಲ್ಲಾ ಪದವೀಧರರಿಗೆ ಸಹಾಯಧನ ಕೊಡುತ್ತಿವೆ ಎಂದು ಹೇಳಿದ್ರು. ಈಗ ಈ ಸಾಲಿನಲ್ಲಿ ಪಾಸ್ ಆದವರಿಗೆ ಮಾತ್ರ ಅನ್ನುತ್ತಿದ್ದಾರೆ. ಮಹಿಳೆಯರಿಗೆ ಸಹಾಯಧನಕ್ಕೂ ಬೇರೆ ಬೇರೆ ಕಾರಣ ಹೇಳ್ತಿದ್ದಾರೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರ ನೀರಿನ ಸಂಕಟ ಬಗೆಹರಿಸುವ ಕೆಲಸ ಆಗಬೇಕು. ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಮಳೆ ಇಲ್ಲದೆ ಬಿತ್ತಿದ್ದು ಒಣಗುತ್ತಿದೆ. ಅಡಕೆಗಳು ಉದುರಿ ಬೀಳುತ್ತಿವೆ'' ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅನ್ನಭಾಗ್ಯ ಯೋಜನೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ