ಶಿವಮೊಗ್ಗ : ದೇವರಾಜ ಅರಸು ಪ್ರಶಸ್ತಿ ನೀಡಲು ನೆರೆ ಸಂತ್ರಸ್ತರ ನೆಪ ಹೇಳುವ ರಾಜ್ಯ ಸರಕಾರ ಇತ್ತೀಚೆಗೆ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡುವಾಗ ನೆರೆ ಸಂಕಟ ಇರಲಿಲ್ಲವೇ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಕುಟುಕಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಪ್ರತಿವರ್ಷ ದೇವರಾಜು ಅರಸು ಜಯಂತಿ ದಿನಾಚರಣೆ ದಿನದ ಅಂಗವಾಗಿ ನೀಡುತ್ತಿದ್ದ, ದೇವರಾಜ ಅರಸು ಪ್ರಶಸ್ತಿಯನ್ನು ಈ ಬಾರಿ ಜಯಂತಿ ಕಳೆದು ಮೂರು ತಿಂಗಳಾದರೂ ಇನ್ನೂ ನೀಡಿಲ್ಲ. ರಾಜ್ಯದಲ್ಲಿ ನೆರೆಹಾವಳಿಯ ಸಂದಿಗ್ಧ ಪರಿಸ್ಥಿತಿಯಿಂದಾಗಿ ದೇವರಾಜು ಅರಸು ಪ್ರಶಸ್ತಿ ನೀಡಿಲ್ಲ ಎಂದು ಉನ್ನತ ಅಕಾರಿಗಳು ಸಬೂಬು ನೀಡುತ್ತಿದ್ದಾರೆ.
ಕಲ್ಲೂರು ಮೇಘರಾಜ್ ಸುದ್ದಿಗೋಷ್ಠಿ ಆದರೆ, ಕೊಟ್ಯಾಂತರ ರೂ. ಖರ್ಚು ಮಾಡಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು, ಅಲ್ಲದೇ ಬರುವ ಫೆಬ್ರವರಿಯಲ್ಲಿ ಹತ್ತು ಕೋಟಿಗೂ ಅಧಿಕ ಖರ್ಚು ಮಾಡಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ರಾಜ್ಯ ಸರಕಾರದ ಬಳಿ ಹಣವಿದೆ, ಆದರೆ ದೇವರಾಜ ಅರಸು ಪ್ರಶಸ್ತಿ ನೀಡಲು ಹಣವಿಲ್ಲವೇ ಎಂದು ಪ್ರಶ್ನಿಸಿದರು.
ಅರಸು ಪ್ರಶಸ್ತಿ ನೀಡಲು ಸರಕಾರದಲ್ಲಿ ಹಣವಿಲ್ಲದಿದ್ದರೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ರಾಜ್ಯಾದ್ಯಂತ ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಪ್ರಶಸ್ತಿಗೆ ನೀಡಬೇಕಾದ 5 ಲಕ್ಷ ರೂ.ಗಳನ್ನು ಸಂಗ್ರಹಿಸಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಈ ಪ್ರಶಸ್ತಿ ಕೊಡಲು ನೀಡುತ್ತೇವೆ ಎಂದು ಕುಟುಕಿದರು. ದೇವರಾಜ ಅರಸು ಪ್ರಶಸ್ತಿ ನೀಡುವಲ್ಲಿ ಸರಕಾರ ಸಬೂಬು ಹೇಳುವುದನ್ನು ಬಿಟ್ಟು, ಕೂಡಲೇ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.