ಶಿವಮೊಗ್ಗ:ವಿಧಾನ ಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ತನ್ನ ಶಿಫಾರಸುಗಳನ್ನು ಮುಂದಿನ ಅಧಿವೇಶನದ ಸಂದರ್ಭದಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಮಾರ ಬಂಗಾರಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಿತಿಯ ಪರಿಶೀಲನಾ ಸಭೆ ನಡೆಸಿದ ಅವರು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ವಸತಿ ಶಾಲೆಗಳನ್ನು ಆರಂಭಿಸುವ ಬಗ್ಗೆ, ಸೀಟುಗಳನ್ನು ಹೆಚ್ಚಿಸುವ ಬಗ್ಗೆ ವಿಸ್ಕೃತವಾದ ಯೋಜನೆಯನ್ನು ಸಿದ್ಧಪಡಿಸಿ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಇದರಲ್ಲಿ ಹಾಸ್ಟೆಲ್‍ಗಳ ಅವಶ್ಯಕತೆ, ಮೂಲಸೌಕರ್ಯಗಳು ಸೇರಿದಂತೆ ಸಮಗ್ರ ಮಾಹಿತಿಗಳು ಸೇರಿರಬೇಕು ಎಂದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಮಾರ ಬಂಗಾರಪ್ಪ ಇದೇ ರೀತಿ ವಿವಿಧ ಇಲಾಖೆಗಳಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿರುವ ಕುಟುಂಬಗಳ ವಂಶಾವಳಿಯನ್ನು ಸಿದ್ಧಪಡಿಸಬೇಕು. ಈ ಮೂಲಕ ಒಂದೇ ಕುಟುಂಬಕ್ಕೆ ಸರ್ಕಾರದ ಎಲ್ಲಾ ಸೌಲಭ್ಯಗಳು ನಿರಂತರವಾಗಿ ಸಿಗುವುದನ್ನು ತಪ್ಪಿಸಬಹುದಾಗಿದೆ ಎಂದು ಸಭೆಯಲ್ಲಿ ಅವರು ಸೂಚನೆ ನೀಡಿದರು.
ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಕಾರ ಎಲ್ಲಾ ಇಲಾಖೆಗಳಲ್ಲಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳಿವೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್‍ಗಳ ಸ್ಥಿತಿಗತಿ ಚೆನ್ನಾಗಿಲ್ಲ. ಹಾಸ್ಟೆಲ್‍ಗಳ ಕುಂದುಕೊರತೆ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು. ಹಾಸ್ಟೆಲ್‍ಗಳ ಮಂಜೂರಾತಿಗೆ ಮುನ್ನವೇ ಎಲ್ಲಾ ತಾಲೂಕುಗಳಲ್ಲಿ ಜಮೀನು ಕಾಯ್ದಿರಿಸುವ ಕಾರ್ಯ ನಡೆಯಬೇಕಾಗಿದೆ. ಬಾಡಿಗೆಗೆ ಹಾಸ್ಟೆಲ್‍ಗಳನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ದಾಖಲೆಗಳು ಸಮರ್ಪಕವಾಗಿದೆಯೇ ಎಂದು ಪರಿಶೀಲಿಸಬೇಕು ಎಂದು ಹೇಳಿದರು.
ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದ್ದು, ಇನ್ನು ಮುಂದೆ ಕಾಮಗಾರಿಯಲ್ಲಿ ಜಿಪಿಎಸ್ ಅಳವಡಿಸಿ, ಫಲಾನುಭವಿಯ ಖಾತೆಗೆ ನೇರವಾಗಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಬೇಕು. ಮದ್ರಸಾಗಳಲ್ಲಿ ಇತರ ವಿಷಯಗಳ ಬಗ್ಗೆಯೂ ಕಲಿಕೆಗೆ ಕ್ರಮ ವಹಿಸಬೇಕು. ಡಿಡಿಪಿಐ ಇದರ ಬಗ್ಗೆ ಮುತುವರ್ಜಿ ವಹಿಸಬೇಕು. ಜಿಲ್ಲೆಯಲ್ಲಿ ಇರುವ 770 ವಕ್ಫ್ ಆಸ್ತಿಗಳ ಪೈಕಿ 606 ಆಸ್ತಿಗಳ ಖಾತೆಯಾಗಿದ್ದು, ಇದರಿಂದ ಬರುವ ಆದಾಯ, ವಹಿವಾಟುಗಳನ್ನು ಜಿಲ್ಲಾಧಿಕಾರಿ ಅವರು ಪರಿಶೀಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರು, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿಷ್ಠಾಧಿಕಾರಿ ಶಾಂತಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.