ಶಿವಮೊಗ್ಗ:ಸಾಮಾನ್ಯವಾಗಿ ಕಬ್ಬಿನಿಂದ ಬೆಲ್ಲವನ್ನು ತಯಾರಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಬೇರೊಂದು ಹಣ್ಣಿನಿಂದಲೂ ಅಷ್ಟೇ ಸಿಹಿಯಾದ ಬೆಲ್ಲವನ್ನು ತಯಾರಿಸಿ ಯಶಸ್ವಿಯಾಗಬಹುದು ಎಂಬುದನ್ನು ಹೊಸನಗರದ ರೈತ ಜಯರಾಮಶೆಟ್ಟಿ ಸಾಧಿಸಿ ತೋರಿಸಿದ್ದಾರೆ.
ಕಲ್ಲಂಗಡಿ ಹಣ್ಣಿನಿಂದ ತಯಾರಾಯ್ತು ಜೋನಿ ಬೆಲ್ಲದ ಕುರಿತು ರೈತ ಜಯರಾಮಶೆಟ್ಟಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ಹೊಸನಗರದ ರೈತ ಜಯರಾಮಶೆಟ್ಟಿ ಅವರು ಲಾಕ್ಡೌನ್ ಅವಧಿಯಲ್ಲಿ ಬೆಳೆದ ಕಲ್ಲಂಗಡಿ ಬೆಳೆಗೆ ಯೋಗ್ಯ ಬೆಲೆ ಸಿಗದೇ ಕಂಗಾಲಾಗಿದ್ದರು. ಆದರೂ ದೃತಿಗೆಡದ ಅವರು ಹಣ್ಣಿನಿಂದ ಏನೆಲ್ಲಾ ತಯಾರಿಸಬಹುದು ಎಂದು ಯೋಚಿಸಿದ್ದಾರೆ. ಈ ವೇಳೆ, ಸಾಕಷ್ಟು ಆಲೋಚನೆ ಮಾಡಿದ ಅವರು ಕೊನೆಗೆ ಜೋನಿ ಬೆಲ್ಲವನ್ನು ತಯಾರಿಸುವ ಯೋಜನೆಗೆ ಕೈ ಹಾಕಿ, ಈಗ ಯಶಸ್ವಿಯೂ ಆಗಿದ್ದಾರೆ.
ಮಲೆನಾಡಿನಲ್ಲಿ ಒಂದು ಸಂಪ್ರದಾಯವಿದೆ. ಅದೇನಂದರೆ, ಇಲ್ಲಿನ ರೈತರು ತಮ್ಮ ಭೂಮಿಯಲ್ಲಿ ಬೆಳೆದ ಕಬ್ಬಿನಿಂದ ಬೆಲ್ಲ ತಯಾರು ಮಾಡಿಕೊಳ್ಳುತ್ತಾರೆ. ಹೀಗೆ ಬೆಲ್ಲವನ್ನು ತಯಾರಿ ಮಾಡುವಾಗ ಯಾವುದೇ ಕಲಬೆರಕೆ ಮಾಡುವುದಿಲ್ಲ. ಬೆಲ್ಲ ತಯಾರು ಮಾಡುವುದನ್ನು ತಿಳಿದಿದ್ದ ಜಯರಾಮ ಶೆಟ್ಟರು, ತಮ್ಮಲ್ಲಿನ ಒಂದೆರಡು ಕಲ್ಲಂಗಡಿಯಿಂದ ಮೊದಲು ಸಣ್ಣ ಪ್ರಮಾಣದ ಬೆಲ್ಲ ತಯಾರು ಮಾಡಿ ಕೆಲವರಿಗೆ ಬೆಲ್ಲ ಸವಿಯಲು ಹೇಳಿದ್ದಾರೆ. ಬೆಲ್ಲದ ಸವಿ ಸವಿದವರು ಚೆನ್ನಾಗಿದೆ ಎಂದು ಹೇಳಿದ ಮೇಲೆ ತಮ್ಮ ಹೊಲದ ಕಲ್ಲಂಗಡಿಯಲ್ಲಿ ಬೆಲ್ಲ ತಯಾರಿಗೆ ಮುಂದಾಗಿದ್ದಾರೆ.
ಬೆಲ್ಲದ ತಯಾರಿಕೆ ಹೇಗೆ:ಕಲ್ಲಂಗಡಿ ಹಣ್ಣನ್ನು ಸಿಪ್ಪೆ ತೆಗೆದು ಜ್ಯೂಸ್ ಮಾಡುವ ಮಿಷನ್ ಅಥವಾ ಕೈಯಲ್ಲಿ ಜ್ಯೂಸ್ ತಯಾರಿಸಿಕೊಳ್ಳಬೇಕು. ಸಾಕಷ್ಟು ಬಾರಿ ಫಿಲ್ಟರ್ ಮಾಡಿಕೊಂಡು ಬೆಲ್ಲ ತಯಾರಿಸುವ ದೊಡ್ಡ ಕೊಪ್ಪರಿಗೆಗೆ ಹಾಕಬೇಕು. ಆಮೇಲೆ ಚೆನ್ನಾಗಿ ಕುದಿಸಬೇಕು. ನಂತರ ಅದರಲ್ಲಿನ ನೀರಿನ ಅಂಶ ಸಂಪೂರ್ಣ ಆವಿಯಾಗಿ ಪಾಕ ಮಾತ್ರ ಉಳಿಯುತ್ತದೆ. ನಂತರ ಚೆನ್ನಾಗಿ ಹದವನ್ನು ನೋಡಿಕೊಂಡು ಮತ್ತೊಂದು ಕೊಪ್ಪರಿಗೆಗೆ ಹಾಕಬೇಕು. ಇದಾದ ನಂತರ ಸಿಹಿ ಸಿಹಿಯಾದ ಜೋನಿ ಬೆಲ್ಲ ರೆಡಿಯಾಗುತ್ತದೆ.
ಓದಿ:ರಾಜ್ಯದಲ್ಲಿಂದು 16 ಸಾವಿರ ಮಂದಿಗೆ ಕೋವಿಡ್: 463 ಮಂದಿ ಸೋಂಕಿಗೆ ಬಲಿ