ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ್ ಶಿವಮೊಗ್ಗ: ರಾಜ್ಯದ ಪ್ರಮುಖ ಆನೆ ಬಿಡಾರಗಳಲ್ಲಿ ಒಂದಾದ ಸಕ್ರೆಬೈಲು ಆನೆ ಬಿಡಾರದ ಸಾಕಾನೆ ಭಾನುಮತಿ ಆನೆಯ ಬಾಲವನ್ನು ಕಿಡಿಗೇಡಿಗಳು ಕತ್ತರಿಸಲು ಯತ್ನಿಸಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಆನೆ ತುಂಬು ಗರ್ಭಿಣಿಯಾಗಿದ್ದು, ಯಾವಾಗ ಬೇಕಾದರೂ ಮರಿ ಹಾಕುವ ಸಂಭವವಿದೆ.
ಪ್ರತಿದಿನ ಮಧ್ಯಾಹ್ನ ಆನೆಗಳನ್ನು ಕಾಡಿಗೆ ಬಿಡಲಾಗುತ್ತದೆ. ಮರುದಿನ ಬೆಳಿಗ್ಗೆ ಆನೆಯನ್ನು ಕ್ಯಾಂಪ್ಗೆ ಕರೆತರಲಾಗುತ್ತದೆ. ಇದು ಇಲ್ಲಿನ ದೈನಂದಿನ ಕಾರ್ಯ. ಸೋಮವಾರ ಭಾನುಮತಿ ಆನೆಯನ್ನು ನೋಡಲು ಹೋದಾಗ ಸಿಬ್ಬಂದಿಗೆ ದಾರಿಯಲ್ಲಿ ರಕ್ತ ಬಿದ್ದಿರುವುದು ಕಂಡುಬಂದಿದೆ. ಆನೆ ಮರಿ ಹಾಕಿರಬಹುದು ಎಂದು ತಿಳಿದು ಸಮೀಪ ಹೋದಾಗ ಬಾಲದಲ್ಲಿ ರಕ್ತ ಕಾಣಿಸಿಕೊಂಡಿದೆ. ಇನ್ನೂ ಹತ್ತಿರ ಹೋಗಿ ನೋಡಿದಾಗ ಆನೆಯ ಬಾಲ ಬಹುತೇಕ ತುಂಡಾಗಿರುವುದು ಗೊತ್ತಾಗಿದೆ. ಕಿಡಿಗೇಡಿಗಳು ಬಾಲವನ್ನು ಸುಮಾರು 2 ಇಂಚು ಆಳದಷ್ಟು ಹರಿತ ಆಯುಧದಿಂದ ತುಂಡರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಬ್ಬಂದಿ ತಕ್ಷಣ ಆನೆಯನ್ನು ಕ್ಯಾಂಪ್ಗೆ ಕರೆದುಕೊಂಡು ಬಂದು ವೈದ್ಯ ವಿನಯ್ ಅವರಿಗೆ ಮಾಹಿತಿ ನೀಡಿದ್ದಾರೆ. ಡಾ.ವಿನಯ್ ಆನೆಯ ಬಾಲಕ್ಕೆ ಏಳು ಹೊಲಿಗೆ ಹಾಕಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ತನಿಖಾ ಸಮಿತಿ ರಚನೆ: ಘಟನೆ ಕುರಿತು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ್ ಮಾತನಾಡಿ, "ಗರ್ಭಿಣಿ ಆನೆ ಭಾನುಮತಿಯ ಬಾಲ ಕಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆನೆ ಬಾಲವನ್ನು ಯಾರು ಹೀಗೆ ಮಾಡಿದರೆಂದು ತಿಳಿಯಲು ಎಸಿಎಫ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಲಾಗಿದೆ. ಆನೆ ಬಾಲವನ್ನು ಒಳಗಿನವರು ಯಾರಾದರೂ ಕಟ್ ಮಾಡಲು ಯತ್ನಿಸಿದರಾ, ಹೊರಗಡೆಯವರು ಬಂದು ಯತ್ನಿಸಿದರಾ ಅಥವಾ ಬಾಲ ಬಿದಿರಿನ ತುದಿಗೆ ತಗುಲಿ ಹೀಗೆ ಆಗಿದೆಯೇ ಎಂದು ತಿಳಿದು ವರದಿಯನ್ನು ಒಂದು ವಾರದೊಳಗೆ ನೀಡುವಂತೆ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.
ಕಾದಾಟದಲ್ಲಿ ಆನೆ ಸಾವು (ಪ್ರತ್ಯೇಕ ಘಟನೆ): ಇತ್ತೀಚಿಗೆ, 35 ವರ್ಷದ ಗಂಡು ಕಾಡಾನೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಕುರುಬರಹುಂಡಿ ಬಳಿಯ ಆಲದ ಮರದ ಹಳ್ಳ ಅರಣ್ಯ ಪ್ರದೇಶದಲ್ಲಿ ನಡೆದಿತ್ತು. ಕಾಡಾನೆಯು ಮತ್ತೊಂದು ಕಾಡಾನೆಯ ಜೊತೆ ಕಾದಾಟ ನಡೆಸಿ ಮೃತಪಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದರು.
ಇದನ್ನೂ ಓದಿ:ಚನ್ನಗಿರಿಯಲ್ಲಿ ಇಬ್ಬರನ್ನು ಕೊಂದ ಪುಂಡಾನೆ ಈಗ ಸಕ್ರೆಬೈಲಿನ ವಿಧೇಯ ವಿದ್ಯಾರ್ಥಿ!