ಶಿವಮೊಗ್ಗ: ಅಭಿವೃದ್ದಿಗಾಗಿ ರಾಜಕಾರಣ ಬದಿಗಿಟ್ಟು ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಸಲಹೆ ನೀಡಿದ್ದಾರೆ. ಆಗಸ್ಟ್ 31ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಈಗಾಗಲೇ ಇಂಡಿಗೋ ವಿಮಾನ ಸಂಸ್ಥೆಯು ತನ್ನ ವೆಬ್ಸೈಟ್ನಲ್ಲಿ ಶಿವಮೊಗ್ಗ-ದೆಹಲಿ ವಿಮಾನವನ್ನು ಬೆಂಗಳೂರಿನ ಮೂಲಕ ಸಂಪರ್ಕ ಕಲ್ಪಿಸುತ್ತಿದೆ. ಅದೇ ರೀತಿ ಮುಂಬೈಗೂ ಸಂಪರ್ಕ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಮಾನಗಳು ಹಾರಾಟ ಮಾಡಲಿವೆ ಎಂದು ಮಾಹಿತಿ ನೀಡಿದರು.
ಯಡಿಯೂರಪ್ಪ, ಈಶ್ವರಪ್ಪರಿಂದ ಶಿವಮೊಗ್ಗ ಅಭಿವೃದ್ಧಿ: ಇದೇ ವೇಳೆ, ಅಂಡರ್‌ಪಾಸ್ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಟ್ಟ ವೀರಶೈವ ಸಮಾಜದವರಿಗೆ ಅಭಿನಂದನೆ ಸಲ್ಲಿಸಿದ ಅವರು, ಕೋವಿಡ್ ನಂತರದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ಸಹಕಾರದಿಂದ ಶಿವಮೊಗ್ಗ ಜಿಲ್ಲೆ ಸಾಕಷ್ಟು ಅಭಿವೃದ್ದಿ ಕಾಣುತ್ತಿದೆ. ಭೂಮಿಪೂಜೆ ನಡೆದು ಒಂದೂವರೆ ವರ್ಷವಾದ ನಂತರ ಉದ್ಘಾಟನೆ ಆಗುತ್ತಿದೆ ಎಂದು ಬೇಜಾರಾಗಿರಬಹುದು. ರೈಲ್ವೆ ಯೋಜನೆಗಳಿಗೆ ಭೂಮಿಪೂಜೆ ನಡೆಸಿದರೆ ಅದರ ಉದ್ಘಾಟನೆ ಯಾವಾಗ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಅದರೆ ಮೋದಿ ಅವರು ಪ್ರಧಾನಿ ನಂತರ ರೈಲ್ವೆ ಯೋಜನೆಗಳು ಪ್ರಗತಿ ಕಂಡಿವೆ. ಭಾರತವನ್ನು ಸಂಪರ್ಕಿಸುವ ವಂದೇ ಭಾರತ್ ರೈಲಿಗೆ ಈಗಲೂ ಕಲ್ಲು ಹೊಡೆಯುವ ಮನಸ್ಥಿತಿಯವರು ನಮ್ಮಲ್ಲಿದ್ದಾರೆ ಎಂದು ತಿಳಿದು ನೋವಾಗುತ್ತಿದೆ ಎಂದರು.
₹3.56 ಕೋಟಿ ವೆಚ್ಚದ ಅಂಡರ್‌ಪಾಸ್ ನಿರ್ಮಾಣ: ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಮಾತನಾಡಿ, ಅಭಿವೃದ್ದಿಗೆ ಇನ್ನೊಂದು ಹೆಸರೇ ಯಡಿಯೂರಪ್ಪ. ಈಗ ಯಡಿಯೂರಪ್ಪನವರ ಹೆಸರು ಉಳಿಸುವ ಕೆಲಸವನ್ನು ಸಂಸದ ರಾಘವೇಂದ್ರ ಮಾಡುತ್ತಿದ್ದಾರೆ. ಈ ಭಾಗಕ್ಕೆ ಅವಶ್ಯಕತೆ ಇದ್ದ 3.56 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಡರ್‌ಪಾಸ್‌ಗೆ ಇಂದು ಚಾಲನೆ ಸಿಕ್ಕಿದೆ. ಹಿಂದಿನವರು ಕೇವಲ ಮಾತಿನಲ್ಲಿ ರೈಲು ಬಿಡುತ್ತಿದ್ದರು.