ಶಿವಮೊಗ್ಗ:ಸಹಕಾರ ಕ್ಷೇತ್ರದಲ್ಲಿ ರಾಜಕೀಯದ ಪ್ರವೇಶ ಇರಬಾರದು. ರಾಜಕಾರಣ ಪ್ರವೇಶಿಸಿದರೆ ಸಹಕಾರಿ ಸಂಸ್ಥೆಯ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಆಗುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ಸಹಕಾರ ಕ್ಷೇತ್ರಕ್ಕೆ ಯುವಜನರನ್ನು ತರುವ ಕೆಲಸವಾಗಬೇಕು. ಯುವಜನರು ಸಹಕಾರಿ ಕ್ಷೇತ್ರದಲ್ಲಿ ಆಸಕ್ತಿ ವಹಿಸುವ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಪ್ರಯತ್ನ ನಡೆಸಲಿದೆ. ಆಪ್ಸ್ಕೋಸ್ ಮೊದಲ ಕಾರ್ಯದರ್ಶಿಯಾಗಿರುವ ಮಹಾಬಲರಾವ್ ಅವರ ವಿರುದ್ಧದ ಪ್ರಕರಣ ಹಿಂಪಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದ ಸಚಿವರು, ಪ್ರತಿ ಸಹಕಾರ ಸಂಘದ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ರೈತರ ಆರ್ಥಿಕ ಸದೃಢತೆಗೆ ಶ್ರಮಿಸಲಾಗುತ್ತದೆ ಎಂದು ಹೇಳಿದರು.
ಅಡಿಕೆ ಕ್ಯಾನ್ಸರ್ ಕಾರಕವಲ್ಲ: ಸುವರ್ಣ ಮಹೋತ್ಸವ ಕೂಪನ್ ಬಿಡುಗಡೆ ಮಾಡಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಅಡಿಕೆ ಬೆಳೆ ಜಿಲ್ಲೆಯ ಆರ್ಥಿಕ ಜೀವನಾಡಿ. ಅಡಿಕೆ ಬೆಳೆಗಾರರ ಪರವಾಗಿ ಕೇಂದ್ರ ಸರ್ಕಾರವಿದೆ. ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ವರದಿ ಬೆಳೆಗಾರ ಸಮೂಹಕ್ಕೆ ಆತಂಕ ತಂದಿತ್ತು. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅಡಿಕೆ ಟಾಸ್ಕ್ಫೋರ್ಸ್ ಸ್ಥಾಪಿಸಿ ಅಡಿಕೆ ಕುರಿತು ವರದಿ ಬಂದಿದ್ದು ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಬದಲಾಗಿ ಕ್ಯಾನ್ಸರ್ ನಿವಾರಣೆಗೆ ಪೂರಕ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಅಡಿಕೆ ಮೇಲಿನ ಅಪವಾದವನ್ನು ತೆಗೆದು ಹಾಕುವ ಕೆಲಸ ಮಾಡಲಾಗುತ್ತದೆ ಎಂದರು.
ಅಡಿಕೆ ಪರ್ಯಾಯ ಉಪಯೋಗದ ಸಂಶೋಧನೆ: ಅಡಿಕೆಯ ಪರ್ಯಾಯ ಉಪಯೋಗದ ಬಗ್ಗೆ ಸಹ ಸಂಶೋಧನೆಯೂ ನಡೆಯುತ್ತಿದೆ. ಅಡಿಕೆ ಸಿಪ್ಪೆ, ಅಡಿಕೆ ಹಾಳೆಯನ್ನು ಸದ್ಭಳಕೆ ಮಾಡಿಕೊಳ್ಳುವತ್ತ ಗಮನ ಹರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಒಪ್ಪಂದದ ಪ್ರಕಾರ 17 ಸಾವಿರ ಟನ್ ಅಡಿಕೆ ಭೂತಾನ್ ದೇಶದಿಂದ ಆಮದು ಮಾಡಿಕೊಳ್ಳುತ್ತಿದೆ ಎನ್ನುವ ಸುದ್ದಿ ಹರಡಿದೆ. ಇದು ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ ನಡೆಯುತ್ತಿದೆ. ಆದರೆ ಹಡಗಿನ ಮೂಲಕ ಅಡಿಕೆ ನಮ್ಮ ದೇಶಕ್ಕೆ ಬರಲು ಅನೇಕ ಸಮಸ್ಯೆಗಳು ಇರುವುದರಿಂದ ಇಂತಹ ಸುದ್ದಿಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.