ಶಿವಮೊಗ್ಗ:ಅಂತ್ಯ ಸಂಸ್ಕಾರಕ್ಕೆತೆಗೆದುಕೊಂಡು ಹೋಗುತ್ತಿದ್ದ ಶವವನ್ನು ಪೊಲೀಸರು ಚಟ್ಟದಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಘಟನೆ ನಗರದ ಮಾರುತಿ ಕ್ಯಾಂಪ್ನಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಠಲ ಎಂಬಾತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮೃತ ವಿಠಲನ ಉರುಳಿಹಳ್ಳಿ ಬಳಿಯ ಮಾರುತಿ ಕ್ಯಾಂಪ್ನ ನಿವಾಸಿಯಾಗಿದ್ದು, ಈತ ತನ್ನ ಸ್ನೇಹಿತನ ಜೊತೆ ಮದ್ಯ ಸೇವಿಸಿ ಲಕ್ಕಿನಕೊಪ್ಪ ಸಮೀಪದ ಅರಣ್ಯದಲ್ಲಿ ಮಲಗಿದ್ದರು. ಬಳಿಕ ಮಧ್ಯಾಹ್ನವೇ ವಿಠಲನ ಸ್ನೇಹಿತ ಎದ್ದು ಮನೆಗೆ ಹೋಗಿದ್ದ. ಆದರೆ ವಿಠಲ ಮಾತ್ರ ಮನೆಗೆ ತೆರಳಿರಲಿಲ್ಲ ಎನ್ನಲಾಗಿದೆ.
ತದನಂತರ ಮಾರುತಿ ಕ್ಯಾಂಪ್ನ ಜನ ಕಾಡಿನಲ್ಲಿ ನಡೆದು ಹೋಗುವಾಗ ವಿಠಲನನ್ನು ನೋಡಿ ಎದ್ದೇಳಿಸಲು ಪ್ರಯತ್ನ ಮಾಡಿದ್ದಾರೆ. ಆಗ ಎದ್ದೇಳದ ಕಾರಣ ಮನೆಯವರಿಗೆ ತಿಳಿಸಿದ್ದಾರೆ. ಮನೆಯವರು ಬಂದು ನೋಡಿದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಆತನ ಅಂತಿಮ ಸಂಸ್ಕಾರಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಆದರೆ ಈ ಸಂದರ್ಭದಲ್ಲಿ ಗ್ರಾಮಸ್ಥರೊಬ್ಬರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತುಂಗಾ ನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಗ್ರಾಮಕ್ಕೆ ಬಂದ ಪೊಲೀಸರು, ಶವವನ್ನು ಚಟ್ಟದಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ:ಕೆರೂರಲ್ಲಿ ಗುಂಪು ಘರ್ಷಣೆ: ಹಳೇ ದ್ವೇಷ, ಯುವತಿಯರನ್ನು ಚುಡಾಯಿಸಿದ್ದೇ ಗಲಾಟೆಗೆ ಕಾರಣ