ಶಿವಮೊಗ್ಗ: ತಾಲೂಕಿನ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಪೊಲೀಸರು ದಾಳಿ ಮಾಡಿ, ಪರಿಶೀಲನೆ ನಡೆಸಿದರು. ಶಿವಮೊಗ್ಗ ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ಕಾರಾಗೃಹ ಮೇಲೆ ಶೋಧ ಕಾರ್ಯ ನಡೆದಿದೆ. ಗಾಂಜಾ ಸೇವನೆ ಸೇರಿದಂತೆ ಮೊಬೈಲ್ ಬಳಕೆ ಇತರೆ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ತುಂಗಾ ನಗರದ 30 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಶ್ವಾನದಳ, ಎಎಸ್ಸಿ ತಂಡ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.
ಕೋರ್ಟ್ ಅನುಮತಿ ಪಡೆದು ದಾಳಿ: ಕಾರಾಗೃಹದ ಮೇಲೆ ದಾಳಿ ನಡೆಸಬೇಕಾದರೆ ಜಿಲ್ಲಾ ನ್ಯಾಯಾಲಯದ ಅನುಮತಿಯನ್ನು ಪೊಲೀಸ್ ಇಲಾಖೆ ಕಡ್ಡಾಯವಾಗಿ ಪಡೆಯಬೇಕು. ಕಾರಾಗೃಹದ ಮೇಲೆ ಯಾವ ಉದ್ದೇಶಕ್ಕೆ ದಾಳಿ ನಡೆಸುತ್ತಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಹೀಗಾಗಿ ಪೊಲೀಸರು ಕೋರ್ಟ್ ಅನುಮತಿ ಪಡೆದು ಪ್ರತಿ ಎರಡು ತಿಂಗಳಿಗೊಮ್ಮೆ ದಾಳಿ ಮಾಡಿ ಪರಿಶೀಲಿಸುತ್ತಾರೆ.
ಮನೆ ದರೋಡೆ ಮಾಡಿದ್ದ ಮೂವರು ಸೆರೆ:ಮುಖಕ್ಕೆ ಮಾಸ್ಕ್ ಧರಿಸಿ ಮನೆಗೆ ನುಗ್ಗಿ ಮನೆಯವರನ್ನು ಬೆದರಿಸಿ 35 ಗ್ರಾಂ ಚಿನ್ನ, 30 ಸಾವಿರ ರೂ ಹಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರೀತನ್, ರಜತ್ ಹಾಗೂ ವಿಜಯ್ ಬಂಧಿತ ಆರೋಪಿಗಳು. ಮೇ 25ರಂದು ರಾತ್ರಿ ಕಾಮಾಕ್ಷಿಪಾಳ್ಯದ ಸಣ್ಣಕ್ಕಿಬೈಲ್‌ನಲ್ಲಿರುವ ಆಟೋ ಚಾಲಕ ನಾಗೇಶ್ ಮನೆ ಬಳಿ ಮಾಸ್ಕ್ ಧರಿಸಿ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಆರೋಪಿಗಳು ಮನೆ ಬಾಗಿಲು ಬಡಿದಿದ್ದಾರೆ. ಮನೆಯವರು ಬಾಗಿಲು ತೆಗೆಯುತ್ತಿದ್ದಂತೆ ಒಳನುಗ್ಗಿ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಆ ಬಳಿಕ ಮನೆಯಲ್ಲಿದ್ದ 35 ಗ್ರಾಂ ಚಿನ್ನ, 30 ಸಾವಿರ ಹಣ ದೋಚಿ ಪರಾರಿಯಾಗಿದ್ದರು.