ಶಿವಮೊಗ್ಗ : ಇತ್ತೀಚೆಗೆ ಸಾಗರದ ಇಕ್ಕೇರಿ ಕಸಕಸೆಗೊಡ್ಲು ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಮಹಜರು ವೇಳೆ ಕೊಲೆ ಆರೋಪಿ ತಪ್ಪಿಸಿಕೊಳ್ಳಲು ಯತ್ನ: ಪೊಲೀಸರಿಂದ ಫೈರಿಂಗ್ - Police firing on accused in Shimoga
ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಶಿವಮೊಗ್ಗದ ಬನದಕೊಪ್ಪ ಬಳಿ ನಡೆದಿದೆ.
ಅಕ್ಟೋಬರ್ 11 ರಂದು ರಾತ್ರಿ ಕಸಕಸೆಗೊಡ್ಲು ಗ್ರಾಮದ ಬಂಗಾರಮ್ಮ ಮತ್ತು ಅವರ ಮಗ ಪ್ರವೀಣ್ ಅನ್ನು ಬೆಂಗಳೂರು ಮೂಲದ ಭರತ್ ಗೌಡ ಎಂಬಾತ ಕೊಲೆ ಮಾಡಿದ್ದ. ಆರೋಪಿಯನ್ನು ಬಂಧಿಸಿದ ಪೊಲೀಸರು ಮಹಜರು ನಡೆಸಲು ಕರೆ ತಂದಾಗ, ಬನದಕೊಪ್ಪ ಬಳಿ ಮೂತ್ರ ವಿಸರ್ಜನೆಗೆಂದು ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸ್ ಕಾನ್ಸ್ಟೇಬಲ್ ಚಂದ್ರನಾಯ್ಕ ಆತನನ್ನು ಹಿಡಿಯಲು ಹೋದಾಗ, ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ತನಿಖೆಯ ಉಸ್ತುವಾರಿ ಸಾಗರದ ಪ್ರಭಾರ ಸಿಪಿಐ ಕುಮಾರಸ್ವಾಮಿ ಫೈರಿಂಗ್ ಮಾಡಿದ್ದಾರೆ. ಫೈರಿಂಗ್ನಿಂದಾಗಿ ಭರತ್ ಗೌಡನ ಬಲಗಾಲಿಗೆ ಗುಂಡು ತಗುಲಿದೆ. ತಕ್ಷಣ ಚಂದ್ರನಾಯ್ಕ ಹಾಗೂ ಆರೋಪಿ ಭರತ್ ಗೌಡನನ್ನು ಸಾಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಗಾರಮ್ಮ ಹಾಗೂ ಪ್ರವೀಣನನ್ನು ಆತನ ಹೆಂಡತಿಯನ್ನು ಕಟ್ಟಿ ಹಾಕಿ, 10 ತಿಂಗಳ ಮಗುವಿನ ಮುಂದೆಯೇ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ಭರತ್ ಗೌಡನ ಹೆಂಡತಿ ಶೃತಿ ಹಾಗೂ ಕೊಲೆಯಾದ ಪ್ರವೀಣ ಹಿಂದೆ ಪ್ರೀತಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಕೊಲೆ ನಡೆದಿದೆ ಎನ್ನಲಾಗಿದೆ. ಈ ಪ್ರಕರಣ ಭೇದಿಸುವಲ್ಲಿ ಸಿಪಿಐ ಕುಮಾರಸ್ವಾಮಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಅಭಯ ಸೋಮನಾಳ್ ಪ್ರಮುಖ ಪಾತ್ರ ವಹಿಸಿದ್ದರು.